ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತ್ತೊಂದು ಕಲ್ಲು ಕ್ವಾರಿ ದುರಂತ ಸಂಭವಿಸಿದ್ದು, ಜಿಲೆಟಿನ್ ಸ್ಫೋಟಗೊಂಡು ಆರು ಜನ ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಹೀರೆನಾಗವೇಲಿ ಸಮೀಪದ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹಗಳು ಛಿದ್ರಛಿದ್ರವಾಗಿವೆ. ಇನ್ನೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಟಾ ಏಸ್ ವಾಹನದಲ್ಲಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟಗೊಂಡಿದೆ ಎನ್ನಲಾಗಿದೆ. ಜಿಲೆಟಿನ್ ಸಾಗಿಸುತ್ತಿದ್ದ ಟಾಟಾ ಏಸ್ ಡ್ರೈವರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂಜನಿಯರ್, ಕಂಪ್ಯೂಟರ್ ಆಪರೇಟರ್, ವಾಚ್ಮ್ಯಾನ್, ಅಕೌಂಟೆಂಟ್ ಸೇರಿದಂತೆ ಓರ್ವ ಸ್ಥಳೀಯ ವ್ಯಕ್ತಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ದೇಹಗಳು ಛಿದ್ರ ಛಿದ್ರ:
ಸ್ಫೋಟದಿಂದ ಮೃತದೇಹಗಳು ಛಿದ್ರ ಛಿದ್ರವಾಗಿ ಕಲ್ಲು ಕ್ವಾರಿಯಲ್ಲಿ ತೂರಿಬಿದ್ದಿವೆ. ಮೃತರನ್ನು ಮುರಳಿ, ಉಮಾಕಾಂತ, ಅಭಿ, ರಾಮು, ಮಹೇಶ್ ಎಂದು ತಿಳಿದು ಬಂದಿದೆ.
ಅಕ್ರಮ ಜಿಲೆಟಿನ್ ದಾಸ್ತಾನು ಹಿನ್ನೆಲೆ ಫೆ. 7 ರಂದು ಕ್ವಾರಿ ಮೇಲೆ ದಾಳಿ ನಡೆಸಿ ಸ್ಫೋಟಕಗಳನ್ನು ಸೀಜ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಈ ಕ್ರಷರ್ ಗುಡಿಬಂಡೆಯ ಬಿಜೆಪಿ ಮುಖಂಡ ನಾಗರಾಜ್, ಆಂಧ್ರ ಪ್ರದೇಶದ ರಾಘವೇಂದ್ರ ರೆಡ್ಡಿ, ಶಿವಾರೆಡ್ಡಿ ಮಾಲೀಕತ್ವದ ಕ್ರಷರ್ ಇದಾಗಿತ್ತು ಎನ್ನಲಾಗ್ತಿದೆ.
ಪೆರೆಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ಸಚಿವ ಸುಧಾಕರ್ ಮತ್ತು ಜಿಲ್ಲಾಡಳಿತ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸ್ಥಳಕ್ಕೆ ಎಫ್ಎಸ್ಎಲ್, ಬಿಡಿಡಿಎಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಜಿಲ್ಲಾಧಿಕಾರಿ ಲತಾ. ಆರ್ ಭೇಟಿ ನೀಟಿದ್ದು, ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲೂ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು 8 ಮಂದಿ ಸಾವನ್ನಪ್ಪಿದ್ದರು. ಬಳಿಕ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕಿದೆ.