ಚಿಕ್ಕಬಳ್ಳಾಪುರ: ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯನವರ ಪರ್ಮಿಷನ್ ಬೇಕಾ? ಎಂದು ಮಾಜಿ ಮುಖ್ಯಮಂತ್ರಿಗಳ ವಿರುದ್ದ ಮಾಜಿ ಪ್ರಧಾನಿಮಂತ್ರಿ ದೇವೇಗೌಡ ಗುಡುಗಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಕೋಲಾರ ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಚನಾವಣಾ ಪ್ರಚಾರಕ್ಕೆ ಎಚ್.ಡಿ.ದೇವೇಗೌಡ ಎಂಟ್ರಿ ಕೊಟ್ಟಿದ್ದು ಚುನಾವಣೆಯ ಬಿಸಿ ತಾರಕಕ್ಕೇರಿದೆ. ಜಿಲ್ಲೆಯ ಹಲವೆಡೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ವಕ್ಕಲೇರಿ ರಾಮು ಪರ ಪ್ರಚಾರ ನಡೆಸಿದರು.
'ಶಾಸಕ ಕೃಷ್ಣಾರೆಡ್ಡಿ ಖಂಡಿತ ಮಂತ್ರಿಯಾಗುತ್ತಾರೆ'
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಜಯಗಳಿಸಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಶತಸಿದ್ದ, ಶಾಸಕ ಕೃಷ್ಣಾರೆಡ್ಡಿ ಖಂಡಿತ ಮಂತ್ರಿಯಾಗುತ್ತಾರೆ ಎಂದು ಚಿಂತಾಮಣಿಯಲ್ಲಿ ಎಚ್.ಡಿ.ದೇವೇಗೌಡ ತಿಳಿಸಿದರು.
ಮುಸ್ಲಿಂ ಬಾಂಧವರಿಗೆ ಮೀಸಲಾತಿ ನೀಡಿದ್ದು, ವಸತಿ ಶಾಲೆಗಳನ್ನು ಸ್ಥಾಪಿಸಿದ್ದು ನಾನೇ. ಕಾಂಗ್ರೆಸ್ ನಾಯಕರು ಚುನಾವಣೆಗೆ ಮಾತ್ರ ಮುಸ್ಲಿಂರನ್ನು ಬಳಸಿಕೊಳ್ಳುತ್ತಾರೆ. ರಾಜ್ಯದ ಅಭಿವೃದ್ಧಿ, ಪ್ರಗತಿಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಸಬೇಕು ಎಂದು ಇಳಿವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೇನೆ ಎಂದು ದೇವೇಗೌಡ ಹೇಳಿದ್ದಾರೆ.
ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ನಡೆಸಿದ ದೇವೇಗೌಡ ಮಾಜಿ ಮುಖ್ಯಮಂತ್ರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯನ ಪರ್ಮಿಷನ್ ಬೇಕಾ? ಮನಮೋಹನ್ ಸಿಂಗ್ರನ್ನು ಭೇಟಿ ಮಾಡಿದ್ದೇನೆ. ವಾಜಪೇಯಿಯನ್ನು ಭೇಟಿ ಮಾಡಿದ್ದೇನೆ. ಸಿದ್ದರಾಮಯ್ಯನಿಗೆ ನನ್ನ ಪಕ್ಷವನ್ನು ಸರೆಂಡರ್ ಮಾಡ್ತೀವಿ ಅಂತ ಹೇಳಿದ್ದೀವಾ? ಎಂದು ಗುಡುಗಿದ್ದಾರೆ.
'ನನ್ನ ಅನುಮತಿ ಇಲ್ಲದೇ ಸರ್ಕಾರ ಮಾಡಿದರು'
ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ನನ್ನ ಅನುಮತಿ ಇಲ್ಲದೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದರು. ಮುಖ್ಯಮಂತ್ರಿ ಮಾಡಿ ಸರ್ಕಾರ ಕೆಡವಿದವರು ಯಾರು ಎಂದು ಉತ್ತರ ಕೊಡಲಿ ಕೈ ನಾಯಕರಿಗೆ ಪ್ರಶ್ನಿಸಿದರು.
ಜಿಲ್ಲೆಯ ಹಲವೆಡೆ ಚುನಾವಣಾ ಪ್ರಚಾರ ಸಲುವಾಗಿ ದೇವೇಗೌಡರ ಭಾವಚಿತ್ರವನ್ನು ಬಳಕೆ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ ನನ್ನ ಭಾವ ಚಿತ್ರ ಬಳಸಿ ಪ್ರಚಾರ ನಡೆಸಿದರೆ ಪೊಲೀಸರಿಗೆ ದೂರು ನೀಡಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
'ಪ್ರಾಣ ಇರುವವರೆಗೂ ಪಕ್ಷ ಬಿಡಲ್ಲ'
ಇದೇ ವೇಳೆ ಮಾತನಾಡಿದ ಶಿಡ್ಲಘಟ್ಟ ಜೆಡಿಎಸ್ ಮುಖಂಡ ಮೇಲೂರು ರವಿ ದೇವೇಗೌಡರ ಮುಂದೆ ಕಣ್ಣೀರು ಹಾಕಿದ್ದಾರೆ. ನನ್ನ ಪ್ರಾಣ ಇರೋವರೆಗೂ ಶಿಡ್ಲಘಟ್ಟದಲ್ಲಿ ಜೆಡಿಎಸ್ಗೆ ಹಿನ್ನಡೆಯಾಗಲು ಬಿಡಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರಿಗೂ ಒಂದು ಬಿ-ಫಾರಂ ಕೊಟ್ಟಿದ್ದರು. ಆದರೆ ನನಗೆ ಎರಡು ಬಿ-ಫಾರಂ ಕೊಟ್ಟರು. ರಾಜಕಾರಣದಲ್ಲಿ ನಂಬಿಕೆ ಎಂಬುದು ಬಾರಿ ಮುಖ್ಯ. ನನ್ನ ಪ್ರಾಣ ಇರೋವರೆಗೂ ಪಕ್ಷ ಬಿಡಲ್ಲ ಈ ಕ್ಷೇತ್ರದ ಜನತೆ ಧೃತಿಗೆಡಬಾರದು ಎಂದು ಕರೆ ನೀಡಿದರು.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ: ಹೆಸ್ಕಾಂ ಸಿ ದರ್ಜೆ ನೌಕರ ನಾತಾಜಿ ಪಾಟೀಲ ಅಮಾನತು