ಚಿಂತಾಮಣಿ: ಕಾಂಗ್ರೆಸ್ ಪಾದಯಾತ್ರೆಗೆ ಸಿದ್ಧವಾಗಿ ರಸ್ತೆ ಮಧ್ಯದಲ್ಲಿ ನಿಂತಿದ್ದ ಬೈಕ್ ಸವಾರರನ್ನು ದಾರಿ ಬಿಡುವಂತೆ ಕೇಳಿದ ಜೆಡಿಎಸ್ ಕಾರ್ಯಕರ್ತರ ಮೇಲೆ ಎಂ.ಸಿ.ಸುಧಾಕರ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಚಿಂತಾಮಣಿ ತಾಲ್ಲೂಕಿನ ಮೂಗಲಮರಿ ಗ್ರಾಮದಲ್ಲಿನಡೆದಿದೆ.
ನಿನ್ನೆ ಚಿಂತಾಮಣಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೈಕ್ ರ‍್ಯಾಲಿಗೆ ತೆರಳಲು ತಾಲ್ಲೂಕಿನ ಮೂಗಲಮರಿ ಗ್ರಾಮದ ಎಂ.ಸಿ.ಸುಧಾಕರ್ ಬಣದವರು ಸಿದ್ದರಾಗಿದ್ದು, ರಸ್ತೆಯುದ್ದಕ್ಕೂ ನಿಂತಿದ್ದರು. ಜೆಡಿಎಸ್ ಮುಖಂಡ ಶಿವರಾಜ್ ತನ್ನ ತೋಟದ ಕಡೆಯಿಂದ ಮನೆಗೆ ಹೋಗಲು ಬಂದಾಗ ರಸ್ತೆಯಲ್ಲಿ ಅಡ್ಡ ಬಂದ ಬೈಕ್ಗಳನ್ನು ಸ್ವಲ್ಪ ತೆಗೆದು ದಾರಿ ಬಿಡುವಂತೆ ಎಂ.ಸಿ.ಸುಧಾಕರ್ ಬಣದವರನ್ನು ಕೇಳಿದ್ದಾರೆ.
ಇದಕ್ಕೆ ನಿರಾಕರಿಸಿದ ಸುಧಾಕರ್ ಬೆಂಬಲಿಗರು ಹಾಗೂ ಜೆಡಿಎಸ್ ಬೆಂಬಲಿಗರು ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಎರಡು ಗುಂಪಿನ ಮುಖಂಡರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಗಲಾಟೆಯಲ್ಲಿ ಎಂಟು ಜನರು ಗಾಯಗೊಂಡಿದ್ದು, ಎಂ.ಸಿ.ಸುಧಾಕರ್ ಬೆಂಬಲಿಗರು ಐದು ಜನ ಮತ್ತು ಜೆಡಿಎಸ್ ಬೆಂಬಲಿಗರು ಮೂವರು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಎರಡೂ ಕಡೆಗಳಿಂದ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಹಲ್ಲೆಯಲ್ಲಿ ಗಾಯಗೊಂಡ ಜೆಡಿಎಸ್ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿ ಗಲಾಟೆ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆಗೆ ತಾಲೀಮು; ರಥಯಾತ್ರೆ, ಗ್ರಾಮ ವಾಸ್ತವ್ಯ ಜೆಡಿಎಸ್ ಅಸ್ತ್ರ