ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಯಲ್ಲಿ ತೊಡಗಿದ್ದ ತಂದೆ ಹಾಗೂ ತಾತ ಇಬ್ಬರೂ ಹೊಂಡದ ಪಾಚಿಯಲ್ಲಿ ಸಿಲುಕಿಕೊಂಡು ಮೃತಪಟ್ಟಿರುವ ಘಟನೆಯೊಂದು ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಅಂಕಾಲಮಡುಗು ಗ್ರಾಮದಲ್ಲಿ ನಡೆದಿದೆ. ಅಂಕಾಲಮಡುಗು ಗ್ರಾಮದ ವೆಂಕಟರಾಯಪ್ಪ (70), ಚೌಡ ರೆಡ್ಡಿ (50) ಮೃತರೆಂದು ಎಂದು ತಿಳಿದಿದೆ.
ನೀರಿನಲ್ಲಿ ಬಿದ್ದ ಬಾಲಕ ಸಂಜಯ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ಗುರುವಾರ ತಾತ ವೆಂಕಟರಾಯಪ್ಪ, ಮಗ ಚೌಡರೆಡ್ಡಿ ತಮ್ಮ ತೋಟದ ಜಮೀನಿನ ಬಳಿ ಎಂದಿನಂತೆ ಕೃಷಿ ಕೆಲಸಕ್ಕಾಗಿ ತೆರಳಿದ್ದರು. ಮೊಮ್ಮಗ ಸಂಜಯ್ ಸಹ ಅವರ ಜೊತೆ ಹೋಗಿದ್ದನು. ಸಂಜಯ್ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. ಬಾಲಕ ರಕ್ಷಣೆಗಾಗಿ ತಾತ ವೆಂಕಟರಾಯಪ್ಪ ಹೊಂಡಕ್ಕೆ ಇಳಿದಿದ್ದಾರೆ. ಆದರೆ, ಮೊಮ್ಮಗನನ್ನು ರಕ್ಷಣೆ ಮಾಡಲಾಗದೆ ಕೂಗಿಕೊಂಡಿದ್ದಾನೆ. ಸ್ವಲ್ಪ ದೂರದಲ್ಲಿದ್ದ ಮಗ ಚೌಡರೆಡ್ಡಿ ಕೂಡಲೇ ಸ್ಥಳಕ್ಕೆ ಆಗಮಿಸಿ ತಂದೆ ಮತ್ತು ಮಗನ ರಕ್ಷಣೆಗಾಗಿ ಕೃಷಿ ಹೊಂಡಕ್ಕೆ ಇಳಿದಿದ್ದಾರೆ.
ಸೀರೆಯ ನೆರವಿನಿಂದ ಬಾಲಕನ ರಕ್ಷಣೆ: ವೆಂಕಟರಾಯಪ್ಪ ಮತ್ತು ಚೌಡರೆಡ್ಡಿ ಇಬ್ಬರೂ ಪ್ರಯತ್ನಿಸಿದರೂ ಸಾಧ್ಯವಾಗದೇ ಜೋರಾಗಿ ಕೂಗಿಕೊಂಡಿದ್ದಾರೆ. ಪಕ್ಕದ ಜಮೀನಿನಲ್ಲಿದ್ದ ಹಿರಿಯ ವ್ಯಕ್ತಿ ಪೆದ್ದಚೌಡರೆಡ್ಡಿ ಹಾಗೂ ಯುವಕ ಸುದೀಪ್ ಧಾವಿಸಿ ಬಂದು ಬಾಲಕ ಸಂಜಯ್ನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿದ್ದ ಬಾಲಕನ ತಂದೆ ಚೌಡರೆಡ್ಡಿ ಮತ್ತು ತಾತ ವೆಂಕಟರಾಯಪ್ಪ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗದೇ ಇರುವುದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪೆದ್ದಚೌಡರೆಡ್ಡಿ ಮತ್ತು ಸುದೀಪ್ ಸಹ ಹೊಂಡದ ಪಾಚಿಯಲ್ಲಿ ಸಿಕ್ಕಿಕೊಂಡು ಹೊಂಡದಿಂದ ಹೊರಗಡೆ ಬರಲು ಹೊದ್ದಾಡುತ್ತಿದ್ದರು. ಆ ವೇಳೆಗೆ ಅಲ್ಲಿಗೆ ಆಗಮಿಸಿದ್ದ ಪ್ರಮೀಳಮ್ಮ ಎಂಬ ಮಹಿಳೆ ಸಮಯಪ್ರಜ್ಞೆ ತೋರಿ, ತನ್ನ ಸೀರೆಯನ್ನೇ ಬಿಚ್ಚಿ ಕೃಷಿ ಹೊಂಡಕ್ಕೆ ಎಸೆದು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಸೀರೆಯ ನೆರವಿನಿಂದ ಅವರು ಬಾಲಕನನ್ನು ರಕ್ಷಿಸಲಾಗಿದೆ.
ಬಾಲಕ ಸಾರ್ವಜನಿಕ ಆಸ್ಪತ್ರೆಗೆ ದಾಖಲು: ಬಟ್ಲಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ಪುರುಷೋತ್ತಮ್ ಮತ್ತು ಪಿಎಸ್ಐ ಪುನೀತ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತನ ಸಂಬಂಧಿ ಶಿವಮ್ಮ ಬಟ್ಲಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಅಸ್ವಸ್ಥಗೊಂಡಿದ್ದ ಬಾಲಕ ಸಂಜಯ್ನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ತುಂಬಾ ಭಯಪಟ್ಟಿದ್ದಾನೆ. ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯಾಧಿಕಾರಿ ಡಾ.ಸಂತೋಷ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗ ಅಧಿಕಾರಿ ಸಂತೋಷ್, ತಹಶೀಲ್ದಾರ್ ಗಿರೀಶ್ ಬಾಬು ಮತ್ತು ಎಎಸ್ಪಿ ಕುಶಾಲ್ ಚೌಕ್ಸೆ ಸಹ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಯೋಗಕ್ಷೇಮ ವಿಚಾರಿಸಿದರು.
ಇದನ್ನೂ ಓದಿ: ಮೇಕೆ ಮೇಯಿಸಲು ಬಂದು ಜಲಾಶಯಕ್ಕಿಳಿದ ಬಾಲಕಿ ಸೇರಿ ಮೂವರು ನೀರುಪಾಲು