ಚಿಕ್ಕಬಳ್ಳಾಪುರ: ರಸ್ತೆಗಾಗಿ ಅಧಿಕಾರಿಗಳು ರೈತರ ಜಮೀನಿನಲ್ಲಿರುವ ಬೆಳೆಯನ್ನು ನಾಶಪಡಿಸಿ, ರಸ್ತೆ ನಿರ್ಮಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಕೂಕಿನ ಮಂಡಿಕಲ್ಲು ಹೋಬಳಿಯ ಯರ್ರಬಾಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತರು ಫಸಲು ಕಟಾವು ಮಾಡಿದ ಮೇಲೆ ರಸ್ತೆ ನಿರ್ಮಿಸಿ ಎಂದು ಹೇಳಿದ್ರೂ, ರಾತ್ರೋರಾತ್ರಿ ಅಧಿಕಾರಿಗಳು ಇಲ್ಲಿ ರಸ್ತೆಯನ್ನು ನಿರ್ಮಿಸಿದ್ದಾರೆ.
ಈಗ ಆಷಾಢವಿದೆ, ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮಿ ಬರಲಿದೆ. ಆಗ ಜಮೀನಿನಲ್ಲಿರುವ ಗುಲಾಬಿ, ಚೆಂಡು ಮುಂತಾದ ಹೂಗಳಿಗೆ ಬೇಡಿಕೆ ಬರುತ್ತದೆ. ಹಾಗಾಗಿ ಈಗ ರಸ್ತೆ ಮಾಡಬೇಡಿ, ಕಟಾವು ನಂತರ ಮಾಡಿ ಎಂದು ರೈತರು ಮನವಿ ಮಾಡಿದ್ದಾರೆ. ಆದ್ರೆ ಅಧಿಕಾರಿಗಳು ಅವರ ಮಾತಿಗೆ ಯಾವುದೇ ಬೆಲೆಯನ್ನು ನೀಡದೇ, ಬೆಳೆ ನಾಶ ಮಾಡಿ ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ವಿಚಾರವಾಗಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ರೆ, ಈ ರಸ್ತೆ ಮಾಡುವಂತೆ ಪಂಚಾಯಿತಿಯಿಂದ ಅಧಿಕಾರಿಗಳಿಗೆ ಮನವಿ ಪತ್ರ ಬಂದಿದೆ. ಈ ಹಿನ್ನೆಲೆ ಜಾಗವನ್ನು ಗುರುತಿಸಿಕೊಡಬೇಕೆಂದು ತಹಶೀಲ್ದಾರ್ಗೆ ಮನವಿ ಮಾಡಲಾಗಿತ್ತು. ಅದರಂತೆ ನಿನ್ನೆ ಸರ್ವೇ ಕೆಲಸ ಮುಗಿದಿದ್ದು, ಜಾಗವನ್ನು ಸಹ ಗುರುತಿಸಲಾಗಿದೆ. ಈ ವೇಳೆ ಹೊಲದಲ್ಲಿ ಇದ್ದ ಗುಲಾಬಿ ಮತ್ತು ಚೆಂಡು ಹೂ ನಾಶವಾಗಿದೆ ಎನ್ನುತ್ತಾರೆ.
ಇದನ್ನೂ ಓದಿ: ಮೋಡ ಮುಸುಕಿದ ವಾತಾವರಣ: ಲಕ್ಷಾಂತರ ಬಂಡವಾಳ ಮಣ್ಣು ಪಾಲು
ಜಾಗವನ್ನು ತೆರವುಗೊಳಿಸುವ ವೇಳೆ ಸ್ಥಳದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹ ಇದ್ದರು. ಆ ಜಾಗವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಆದರೆ ನಮಗೆ ಇನ್ನೂ ಆ ಜಾಗವನ್ನು ನಮ್ಮ ಸುಪರ್ದಿಗೆ ನೀಡಿಲ್ಲ. ಈ ವೇಳೆ ಬೆಳೆ ನಷ್ಟಕ್ಕೆ ರೈತರು ತಹಶೀಲ್ದಾರ್ ಬಳಿ ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಆದರೆ ನಾವು ಸರ್ಕಾರಿ ಜಾಗವನ್ನು ತೆರವುಗೊಳಿಸಿದ್ದೇವೆ. ಈ ಬೆಳೆಗೆ ಯಾವುದೇ ರೀತಿಯ ಪರಿಹಾರ ಸಿಗಲ್ಲ ಎಂದು ಕಡ್ಡಿ ಮುರಿದ ಹಾಗೆ ಪಿಡಿಓ ಆಶಾ ದೇವಿ ಹೇಳಿದರು.