ಚಿಕ್ಕಬಳ್ಳಾಪುರ: ನಿನ್ನೆ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಬರುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡದೆ ವೃದ್ಧನನ್ನು ಸತಾಯಿಸುತ್ತಿರುವ ಕುರಿತು ಈ ಟಿವಿ ಭಾರತ ಪ್ರಸಾರ ಮಾಡಿದ ವರದಿ ಫಲಪ್ರದವಾಗಿದೆ.
ವರದಿ ಗಮನಿಸಿದ ತಕ್ಷಣ ಅಧಿಕಾರಿಗಳು ವೃದ್ಧನ ಮನೆಗೆ ಓಡೋಡಿ ಬಂದಿದ್ದಾರೆ.
ಮೂಲ ದಾಖಲೆಗಳಿದ್ದರೂ ಸುಮಾರು 9 ತಿಂಗಳುಗಳಿಂದ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಬರುತ್ತಿಲ್ಲ ಎಂಬ ನೆಪದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ವೃದ್ಧನಿಗೆ ಪಡಿತರ ನೀಡುತ್ತಿರಲಿಲ್ಲ. 95 ವರ್ಷದ ವೃದ್ಧ ಹಲವು ಬಾರಿ ನ್ಯಾಯಬೆಲೆ ಅಂಗಡಿ ಬಳಿ ಹೋದರೂ ಯಾವುದಾದರೂ ನೆಪ ಹೇಳಿ ಪಡಿತರ ನೀಡುತ್ತಿರಲಿಲ್ಲ.
ನಿನ್ನೆ ಆ ಸುದ್ದಿಯನ್ನು ಈ ಟಿವಿ ಭಾರತ ಪ್ರಸಾರ ಮಾಡಿದ ತಕ್ಷಣ ಶಿಡ್ಲಘಟ್ಟ ತಹಶೀಲ್ದಾರ್, ತಾಲೂಕಿನ ಕನ್ನಮಂಗಲ ಗ್ರಾಮದ ವೃದ್ಧನ ಮನೆಗೆ ಹೋಗಿ ಹೊಸ ಪಡಿತರ ಚೀಟಿ ನೀಡಿ, 10 ಕೆಜಿ ಅಕ್ಕಿ ಕೊಟ್ಟು ವೃದ್ಧನಿಗೆ ಮುಂದಿನ ತಿಂಗಳಿನಿಂದ ನ್ಯಾಯ ಬೆಲೆ ಅಂಗಡಿಯಿಂದ ಪಡಿತರ ತೆಗೆದುಕೊಂಡು ಬರಲು ತಿಳಿಸಿದರು.