ಚಿಕ್ಕಬಳ್ಳಾಪುರ: ಬೆಂಗಳೂರಿನ ಜನತೆ ತರಕಾರಿ ತಿನ್ನುತ್ತಿರುವುದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ರೈತರಿಂದ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ನಗರದ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕೃಷಿ ಮೇಳ-2020 ರ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕೃಷಿಕ ಈ ದೇಶದ ಬೆನ್ನೆಲುಬು. ಇಂದಿಗೂ ದೇಶದಲ್ಲಿ ಶೇ.60 ರಷ್ಟು ಜನ ಕೃಷಿ ಆಧಾರಿಸಿ ಜೀವನ ನಡೆಸುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ರೈತರಿಂದ ಬೆಂಗಳೂರಿನ ಜನತೆ ತರಕಾರಿ ತಿನ್ನುತ್ತಿದ್ದಾರೆ. ಈ ಭಾಗದ ರೈತರು ಸಾವಿರಾರು ಅಡಿಗಳಿಂದ ನೀರು ಕೊರೆದು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಈ ಭಾಗದ ಜನರಿಗೆ ನೀರನ್ನು ಒದಗಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಎರಡು ಜಿಲ್ಲೆಗಳ ರೈತರು ಹಾಗೂ ಸಂಘಟನೆಗಳು ಹಲವಾರು ವರ್ಷಗಳಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಭಾಗದ ಜನರಿಗಾಗಿ ಸ್ಥಳೀಯ ಶಾಸಕರ ಜೊತೆಗೆ, ನಾನು ಕೂಡ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪ ಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಣ್ಣ ಸೇರಿದಂತೆ ರಥ ಮುಖಂಡರು ಹಾಗೂ ರೈತರು ಭಾಗಿಯಾಗಿದ್ದರು.