ಚಿಕ್ಕಬಳ್ಳಾಪುರ: ದೇಶದಲ್ಲಿ ಪ್ರಜಾಪ್ರಭುತ್ವ ಹಾಳಾಗಿದ್ದೇ ಕಾಂಗ್ರೆಸ್ ಪಕ್ಷದಿಂದ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ನಗರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಏಳು ಬೀಳಿನ ನಡುವೆ ಸರ್ಕಾರ ಯಶಸ್ವಿಯಾಗಿ ಮುಖ್ಯಮಂತ್ರಿಗಳ ಕ್ರಿಯಾಶೀಲ ಬದ್ಧತೆಯಿಂದ ಒಂದು ವರ್ಷ ಪೂರೈಸಿದೆ. ಕಾಯಕವೇ ಕೈಲಾಸವೆಂಬ ಬಸವೇಶ್ವರರ ವಚನದಂತೆ ನಂಬಿಕೆಯಿಂದ ಕೆಲಸವನ್ನು ಮಾಡಿದ್ದೇವೆ ಎಂದು ತಿಳಿಸಿದರು. ವಿಶೇಷ ಸನ್ನಿವೇಶದಲ್ಲಿ ಸರ್ಕಾರ ರೂಪುಗೊಂಡಿದೆ. 17 ಜನ ಶಾಸಕರು ನನ್ನ ಜೊತೆ ಬಂದು ಹಿಂದಿನ ಜನ ವಿರೋಧಿ ಸರ್ಕಾರ ತೊರೆದು ಜನಪರ ಸರ್ಕಾರವನ್ನು ತಂದಿದ್ದೇವೆ ಎಂದರು.
ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ನಮ್ಮನ್ನು ಸೋಲಿಸಲು ಪ್ರಯತ್ನ ಪಟ್ಟಿದ್ದರು. ಆದರೆ 15 ಶಾಸಕರಲ್ಲಿ 12 ಶಾಸಕರು ಗೆದ್ದು, 10 ಶಾಸಕರು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಚಿವರಾದ ನಂತರ ಕೊರೊನಾ ಸೋಂಕು ಪತ್ತೆಯಾಗಿತ್ತು. ನಮ್ಮ ರಾಜ್ಯದಲ್ಲಿ ಕೊರೊನಾ ಹರಡಿದ್ದು ಬೇರೆ ರಾಜ್ಯಗಳಿಂದ ಸೋಂಕು ಹೆಚ್ಚಳವಾಗಿದೆ. ಸದ್ಯ ಕೊರೊನಾ ಯುದ್ಧ ಇನ್ನೂ ಮುಗಿದಿಲ್ಲ. ಲಸಿಕೆ ಬಂದು ಜನರ ಸಹಕಾರದಿಂದ ಮಾತ್ರ ಸೊಂಕು ನಿಯಂತ್ರಿಸಲು ಸಾಧ್ಯ. ಕೊರೊನಾ ಯೋಧರಿಗೆ ಸ್ಫೂರ್ತಿ, ಬೆಂಬಲ ಸೂಚಿಸಲು ಸಾಕಷ್ಟು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆಯುಷ್ ಆಸ್ಪತ್ರೆಯ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಮುಖ್ಯಮಂತ್ರಿಗಳು ಪ್ರೋತ್ಸಾಹ ನೀಡಿದ್ದಾರೆ ಎಂದು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ತಿಳಿಸಿದರು. ಇನ್ನು ಕಾಂಗ್ರೆಸ್ ಜೆಡಿಎಸ್ ಶಾಸಕು ಸಭೆಯ ಗೈರಿನ ಬಗ್ಗೆ ಮಾತಾನಾಡಿದ ಸಚಿವರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಬೇಕಾದ್ರೆ ಎಲ್ಲಾ ಶಾಸಕರು ಆಡಳಿತನ್ನು ನೋಡಬೇಕಿಗಿದೆ. ಪಕ್ಷವನ್ನು ನೋಡಿದ್ರೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಅದನ್ನು ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಡಾ. ಗಿರಿಧರ್ ಕಜೆ ಅವರ ಆಯುರ್ವೇದ ಔಷಧಿಯನ್ನು ಒಂದೇ ಬಾರಿಗೆ ಪರಿಗಣಿಸಲು ಸಾಧ್ಯವಿಲ್ಲ. ಗಿರಿಧರ್ ಕಜೆ ಔಷಧಿ, ರವಿಶಂಕರ್ ಗುರೂಜಿ, ಸದ್ಗುರು ಅವರ ಇನ್ನೂ ಕೆಲವು ಔಷಧಿಗಳ ಬಗ್ಗೆ ಐಸಿಎಂಆರ್‌ಗೆ ಪತ್ರವನ್ನು ಬರೆಯಲಾಗಿದೆ. ಅಲ್ಲಿ ಅನುಮೋದನೆ ಸಿಕ್ಕಿದ್ದಲ್ಲಿ ಉಪಯೋಗಿಸಲು ರಾಜ್ಯ ಸರ್ಕಾರದಿಂದ ಅನುವು ಮಾಡಿಕೊಡಲಾಗುವುದು ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.