ಚಿಕ್ಕಬಳ್ಳಾಪುರ: ಬಿಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಿಸುವ ಅನ್ನಭಾಗ್ಯ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಧಾನ್ಯಗಳನ್ನು ನೀಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಕಳಪೆ ರಾಗಿ ವಿತರಣೆ ಮಾಡುತ್ತಿದ್ದು, ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ಐದು ಮೂಟೆ ರಾಗಿಯಲ್ಲಿ ಕಸ ಕಡ್ಡಿ ಮತ್ತು ಇಲಿಯ ತ್ಯಾಜ್ಯ ಸೇರಿದ ರಾಗಿಯನ್ನು ಜನರಿಗೆ ವಿತರಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ತಿಂಗಳಿನಂತೆ ಈ ತಿಂಗಳು ನ್ಯಾಯಬೆಲೆ ಅಂಗಡಿಗೆ ಹೋದ ಗ್ರಾಮದ ಸಾರ್ವಜನಿಕರು ಅಂಗಡಿಯಲ್ಲಿ ನೀಡುತ್ತಿದ್ದ ರಾಗಿ ನೋಡಿ ಆಘಾತಕ್ಕೊಳಗಾಗಿದ್ದಾರೆ. ನ್ಯಾಯಬೆಲೆ ಅಂಗಡಿಯವರ ಜೊತೆ ಜಗಳ ಮಾಡಿ ತಿನ್ನುವ ಆಹಾರ ಪದಾರ್ಥಗಳಲ್ಲಿಯೂ ಕಳಪೆ ಸಾಮಾಗ್ರಿಗಳನ್ನು ನೀಡಿದರೆ ಬಡ ಜನರ ಪರಿಸ್ಥಿತಿ ಏನು? ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಆಹಾರ ನಿರೀಕ್ಷಕರು ಭೇಟಿ ನೀಡಿ ಕಳಪೆ ರಾಗಿಯ ಮೂಟೆಗಳನ್ನು ವಾಪಾಸ್ ತೆಗೆದುಕೊಂಡು ಬೇರೆ ರಾಗಿ ವಿತರಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಭರವಸೆ ನೀಡಿ ಗ್ರಾಮದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.