ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ನಿನ್ನೆಯಿಂದ ಹದಿನಾಲ್ಕು ದಿನ ಟಫ್ ಲಾಕ್‍ಡೌನ್ ವಿಧಿಸಿದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಾಕ್‍ಡೌನ್ ಬಿಸಿ ತಟ್ಟಿದೆ.
ನಿನ್ನೆ ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ನೀಡಿದ್ದರಿಂದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಜನರು ಗುಂಪು ಗುಂಪಾಗಿ ಸೇರಿದ್ದರು. ಗುಂಪನ್ನು ಚದುರಿಸಲು ಒಂದಿಬ್ಬರು ಪೊಲೀಸರು ಲಾಠಿ ಬೀಸಿದರು. ಹತ್ತು ಗಂಟೆಯ ನಂತರ ಲಾಕ್ ಬಿಗಿಗೊಳಿಸಿದ ಪೊಲೀಸರು, ಅನಗತ್ಯವಾಗಿ ಓಡಾಡುವರಿಗೆ ಲಾಠಿ ರುಚಿ ತೋರಿಸಿ ವಾಹನಗಳನ್ನು ಸೀಜ್ ಮಾಡಿದರು.
ಬೆಳಗ್ಗೆ ಆರು ಗಂಟೆಯಿಂದ ಸಂಜೆ 6 ಗಂಟೆ ಒಳಗಡೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 790 ದ್ವಿಚಕ್ರ ವಾಹನಗಳು, 39 ಕಾರುಗಳು ಹಾಗೂ 1 ಮೂರು ಚಕ್ರದ ವಾಹನ ಜಪ್ತಿ ಮಾಡಿಕೊಂಡಿದಲ್ಲದೆ, ಸವಾರರಿಗೆ ಲಾಠಿ ರುಚಿ ತೋರಿಸಿ ಮನೆಯಲ್ಲೇ ಇರುವಂತೆ ಸೂಚಿಸಿದ್ರು.
ಅಸ್ವಸ್ಥ ಮಹಿಳೆಯನ್ನು ಅಸ್ಪೆತ್ರೆಗೆ ದಾಖಲಿಸಿದ ಬಾಗೇಪಲ್ಲಿ ಪೊಲೀಸ್
ಲಾಕ್‍ಡೌನ್ ನೆಪದಲ್ಲಿ ಪೊಲೀಸರು ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸಿ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂಬ ದೂರಿನ ಮಧ್ಯೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಅಸ್ವಸ್ಥಗೊಂಡಿದ್ದ ಗೂಳೂರು ಗ್ರಾಮದ ಮಹಿಳೆಯನ್ನು ರಕ್ಷಿಸಿ ಬಾಗೇಪಲ್ಲಿ ಪೊಲೀಸ್ ಠಾಣೆ ಕಾನ್ಸ್ಟೇಬಲ್ವೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಬಾಗೇಪಲ್ಲಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಗೂಳೂರು ಗ್ರಾಮದಿಂದ ಬಾಗೇಪಲ್ಲಿ ಪಟ್ಟಣಕ್ಕೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಆಟೋದಲ್ಲಿ ಬಾಗೇಪಲ್ಲಿ ಪಟ್ಟಣಕ್ಕೆ ಆಗಮಿಸಿದ್ದರು. ಪಟ್ಟಣದಲ್ಲಿ ಪೊಲೀಸರನ್ನು ಕಂಡು ಆಟೋ ಚಾಲಕ ದೂರದಲ್ಲಿ ಮಹಿಳೆಯರನ್ನು ನಿಲ್ಲಿಸಿ ಹೋರಟು ಹೋಗಿದ್ದ. ಬೆಳಗ್ಗೆಯಿಂದ ಅನ್ನ ಆಹಾರ ಇಲ್ಲದೆ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಕಾನ್ಸ್ಟೇಬಲ್ ಧನಂಜಯ ತನ್ನ ಬೈಕ್‍ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.
ಗುಡಿಬಂಡೆ ಪಟ್ಟಣಕ್ಕೆ ಆಗಮಿಸಿದ ಬೆಂಗಳೂರಿಗರು...
ಜಿಲ್ಲೆಯ ಗುಡಿಬಂಡೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬೆಂಗಳೂರಿಗರು ಆಗಮಿಸಿದ್ದರು. ಈ ವೇಳೆ ಬೆಂಗಳೂರಿಗರಿಗೆ ಲಸಿಕೆ ವಿತರಣೆ ವಿರೋಧಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆಯಿಂದ 18ರಿಂದ 44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಹೊಸ ಲಾಕ್‍ಡೌನ್ ರೂಲ್ಸ್ ಜಾರಿಯಲ್ಲಿದ್ದರೂ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಂಗಳೂರಿಗರು ಆಗಮಿಸಿ ಲಸಿಕೆ ಪಡೆಯುತ್ತಿದ್ದರು. ಈ ವೇಳೆ ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ಲಸಿಕೆ ನೀಡುತ್ತಿರೋದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.