ಚಿಂತಾಮಣಿ (ಚಿಕ್ಕಬಳ್ಳಾಪುರ): ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸುಮಾರು ₹18 ಕೋಟಿ ರೂಪಾಯಿ ವೆಚ್ಚದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಚಾಲನೆ ನೀಡಲಾಗುತ್ತಿದ್ದು, ಸುಮಾರು 30 ಕಿ.ಮೀ. ರಸ್ತೆ ಅಭಿವೃದ್ಧಿಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ತಾಲೂಕಿನ ಕೈವಾರ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತಾನಾಡಿದ ಅವರು, ಕೈವಾರ ತಾತಯ್ಯನ ಬಳಿ ನೆರೆ ಬರುವ ಕಡೆ ಕಡಿಮೆಯಾಗಲಿ ಮತ್ತು ನಮ್ಮ ಉಭಯ ಜಿಲ್ಲೆಗಳಲ್ಲಿ ಕೆರೆಗಳು ತುಂಬಿ ಹರಿಯುವ ಹಾಗೆ ಮಳೆ ಸುರಿಯಲಿ ಎಂದು ಬೇಡಿಕೊಂಡಿದ್ದೇನೆ ಎಂದರು.
ತಾಲೂಕಿನಲ್ಲಿ ಕಾಲೇಜುಗಳ ಸ್ಥಾಪನೆ ವಿಚಾರವಾಗಿ ಮಾತಾನಾಡಿದ ಸಚಿವರು, ರಾಜ್ಯದಲ್ಲಿ ಸಾವಿರಾರು ಇಂಜಿನಿಯರ್ ಸೀಟ್ಗಳು ಖಾಲಿ ಇವೆ. ಹೊಸ ಇಂಜಿನಿಯರಿಂಗ್ ಕಾಲೇಜುಗಳು ಬೇಡ. ತಾಲೂಕುಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಬರಬೇಕು ನಿಜ. ಆದರೆ, ಬೇಡಿಕೆಗೆ ಅನುಗುಣವಾಗಿ ಪೂರಕ ಸಂಸ್ಥೆಗಳನ್ನು ಹುಟ್ಟು ಹಾಕಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಅನೇಕರು ಮುಂದಾಗಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸಲು ಹಲವರು ಒಪ್ಪಂದ ಮಾಡಿಕೊಂಡಿದ್ದು, ಈ ಭಾಗದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ವಿದ್ಯಾಭ್ಯಾಸದ ನಂತರ ಉದ್ಯೋಗಗಳು ದೊರೆಯಬೇಕು. ಹೀಗಾಗಿಯೇ ಚಿಂತಾಮಣಿ ವ್ಯಾಪ್ತಿಯಲ್ಲಿ 1,000 ಎಕರೆಯಲ್ಲಿ ಕೈಗಾರಿಕೆ ಪ್ರದೇಶವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಎರಡು ದಿನಗಳಲ್ಲಿ ಮೆಡಿಕಲ್ ಕೌನ್ಸಿಲಿಂಗ್ ಮುಗಿಯುತ್ತದೆ. ಸ್ನಾತಕೋತ್ತರ ಪದವಿಗೆ ಬುಧವಾರ ಕೌನ್ಸಿಲಿಂಗ್ ಅಂತ್ಯಗೊಳ್ಳಲಿದೆ. ಅದಾದ ಬಳಿಕ ತರಗತಿಗಳು ಶುರು ಆಗಲಿದೆ. ಸೆಪ್ಟೆಂಬರ್ನಲ್ಲಿ ತರಗತಿಗಳನ್ನು ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೆಲ ದಿನಗಳ ಹಿಂದೆ ಮೆಡಿಕಲ್, ನರ್ಸಿಂಗ್ ಮತ್ತು ಪ್ಯಾರ ಮೆಡಿಕಲ್ ಮುಂದುವರಿಕೆಗೆ ತಕ್ಷಣ ಅವಕಾಶ ನೀಡುವಂತೆ ನಾನೇ ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ದೇಶದಲ್ಲಿ ಶೈಕ್ಷಣಿಕ ನೀತಿ ಶುರುವಾಗಿಲ್ಲ. ಹೊಸ ಶಿಕ್ಷಣ ನೀತಿ ತಿಂಗಳ ಅಂತ್ಯದಲ್ಲಿ ಜಾರಿಗೆ ಬರಲಿದೆ. ಆನ್ಲೈನ್ ಕ್ಲಾಸ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ತಪ್ಪು ಸಂದೇಶಗಳು ಬೇಡವೆಂದು ಸ್ಪಷ್ಟಪಡಿಸಿದರು. ಉತ್ತರ ಪ್ರದೇಶದಲ್ಲಿ ಕೊರೊನಾಗೆ ಬಲಿಯಾದ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದರು.