ಚಿಕ್ಕಬಳ್ಳಾಪುರ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಕೊರೊನಾ ಸೋಂಕು ಹರಡದಂತೆ ಮನೆ ಮನೆಗೂ ತೆರಳಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ಮತದಾನ ಮಾಡುವಂತೆ ನ್ಯಾಷನಾಲಿಟಿ ವೆಲ್ ಫೇರ್ ಟ್ರಸ್ಟ್ ಮಂಡಳಿ ವಿಭಿನ್ನ ರೀತಿಯಲ್ಲಿ ಮತ ಪ್ರಚಾರ ನಡೆಸಿದ್ದಾರೆ.
ಹೌದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಜನರು ಸೇರುವ ಹಿನ್ನೆಲೆ ಗ್ರಾಮಗಳಲ್ಲಿ ಮತದಾನದ ಅರಿವಿನ ಜೊತೆಗೆ ಕೊರನಾ ಸೋಂಕು ಹರಡದಂತೆ ತಗೆದು ಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನ್ಯಾಷನಾಲಿಟಿ ವೆಲ್ ಫೇರ್ ಟ್ರಸ್ಟ್ ಪದಾಧಿಕಾರಿಗಳು ಚಿಂತಾಮಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ಅರಿವು ಕಾರ್ಯಕ್ರಮ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನ್ಯಾಷನಾಲಿಟಿ ವೆಲ್ ಫೇರ್ ಟ್ರಸ್ಟ್‌ನ ಪದಾಧಿಕಾರಿಗಳು ಕೈವಾರ ಗ್ರಾಮದ ಮನೆ ಮನೆಗೆ ತೆರಳಿ ಉಚಿತವಾಗಿ ಮಾಸ್ಕ್ಗಳನ್ನು ವಿತರಿಸಿ ಅವರಿಗೆ ಕೋವಿಡ್ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಅಲ್ಲದೇ ಮತದಾನ ಮಾಡುವ ವೇಳೆ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಟ್ರಸ್ಟ್‌ನ ಅಧ್ಯಕ್ಷ ನಾಸೀಂ ಅಖ್ತರ್ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ಕೋವಿಡ್ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಾಜ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿದರು.