ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಮಳೆಯಿಂದ ಸಂಪೂರ್ಣ ಹಾನಿಗೀಡಾಗಿರುವ ಮನೆಗಳಿಗೆ 5 ಲಕ್ಷ ರೂ., ಭಾಗಶಃ ಹಾನಿಗೆ 3 ಲಕ್ಷ ರೂ. ಹಾಗೂ ಅಲ್ಪಸ್ವಲ್ಪ ಹಾನಿಯಾದರೆ 50 ಸಾವಿರ ರೂ. ಪರಿಹಾರ (Flood relief) ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದ್ದಾರೆ.
ನಗರದ ಬಿಬಿ ರಸ್ತೆಯ ಅಮಾನಿಗೋಪಾಲಕೃಷ್ಣ ಕೆರೆ(Amanigopalakrishna Lake) ಕೋಡಿ ಹರಿದು ನೀರು ನುಗ್ಗಿದ್ದ ಪ್ರದೇಶಗಳ ವೀಕ್ಷಣೆ ಮಾಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ (Minister sudhakar) ಅವರು ಸಮಸ್ಯೆಗಳ ಬಗ್ಗೆ ವಿವರಿಸಿದರು.
ಈ ವೇಳೆ ಸಿಎಂ ಬೊಮ್ಮಾಯಿ ಅವರು ಜಿಲ್ಲಾ ಅಧಿಕಾರಿಗಳ ಜೊತೆ ಸಂವಾದ ನಡೆಸಿ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡರು. ನಂತರ ಈ ಬಗ್ಗೆ ಮಾತನಾಡಿ, 'ನಾಳೆಯಿಂದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಈಗಾಗಲೇ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳಲ್ಲೇ ಇದ್ದಾರೆ. ನೀತಿ ಸಂಹಿತೆ ಕಾರಣದಿಂದಾಗಿ ಅಧಿಕಾರಿಗಳ ಸಭೆ ನಡೆಸಲು ಚುನಾವಣಾ ಆಯೋಗದ ಅನುಮತಿ ಕೋರಿದ್ದೇವೆ. ಆದರೂ, ನಾನು ಇಂದಿನಿಂದಲೇ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ' ಎಂದು ತಿಳಿಸಿದರು.
ಪರಿಹಾರ ಬಿಡುಗಡೆಗೆ ಸೂಚನೆ:
ಶಿಡ್ಲಘಟ್ಟದ ಅಗ್ರಹಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಂದಾಜಿನ ಪ್ರಕಾರ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ರಾಜ್ಯಾದ್ಯಂತ 5 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 40 ಸಾವಿರ ಮನೆಗಳು ಹಾನಿಗೊಳಗಾಗಿದ್ದು, ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸಂಪರ್ಕ ಕಡಿತಗೊಂಡಿರುವ ಗ್ರಾಮಗಳ ಜನರಿಗೆ ಮೊದಲು ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹಾನಿ ಬಗ್ಗೆ ಪರಿಶೀಲನೆ:
ಶಿಡ್ಲಘಟ್ಟ ತಾಲೂಕಿನ ಆನೆಮೊಡಗು ಗ್ರಾಮದಲ್ಲಿ ಟೊಮೆಟೋ, ಹೂ, ತೊಗರಿ, ಭತ್ತ, ಹೂಕೋಸು ಹಾಗೂ ರೇಷ್ಮೆ ನಾಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೆಳೆ ನಾಶವಾಗಿರುವ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಸಚಿವ ಸುಧಾಕರ್, ಸಚಿವ ಆರ್. ಅಶೋಕ್, ಕೋಲಾರ ಲೋಕಸಭಾ ಸಂಸದ ಮುನಿಸ್ವಾಮಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಓದಿ: ಸಿದ್ದರಾಮಯ್ಯನವರು ಹತೋಟಿ ತಪ್ಪಿ ಮಾತನಾಡುತ್ತಿದ್ದಾರೆ : ಬಿಎಸ್‌ವೈ ಆಕ್ರೋಶ!