ಗೌರಿಬಿದನೂರು (ಚಿಕ್ಕಬಳ್ಳಾಪುರ): ಬೈಕ್ ರಿಪೇರಿಯ ಹಣಕ್ಕಾಗಿ ಐದು ಜನರ ನಡುವೆ ಜಗಳ ನಡೆದು ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಕ್ಕ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚೆನ್ನಬೈರೇನಹಳ್ಳಿಯಲ್ಲಿ ನಡೆದಿದೆ. ಚೆನ್ನಬೈರೇನಹಳ್ಳಿಯ ನಿವಾಸಿ ಸತ್ಯನಾರಾಯಣ (50) ಸಾವನ್ನಪ್ಪಿರುವ ವ್ಯಕ್ತಿ. ಒಬ್ಬ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್, "ಸತ್ಯನಾರಾಯಣ ಅವರು ನಗರದ ಕಲ್ಲುಡಿ ಗ್ರಾಮದಲ್ಲಿರುವ ಸಿ ಬಿ ಮೋಟಾರ್ ಸರ್ವಿಸ್ ಸ್ಟೇಷನ್ನಲ್ಲಿ ತಮ್ಮ ಬೈಕ್ ಅನ್ನು ರಿಪೇರಿಗೆ ಬಿಟ್ಟಿದ್ದರು. ಬೈಕ್ ರಿಪೇರಿ ಆದ ಬಳಿಕ ಮೆಕಾನಿಕ್ ಚೇತನ್ ಎಲ್ (21) ಎಂಬ ಯುವಕ ಬೈಕ್ ರಿಪೇರಿ ಹಣವನ್ನು ಕೇಳುವ ಸಮಯದಲ್ಲಿ ಚೇತನ್ ಹಾಗೂ ಸತ್ಯನಾರಾಯಣ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಗಲಾಟೆ ನಡೆದಿದೆ. ನಂತರ ಸತ್ಯನಾರಾಯಣ್ ಅಲ್ಲಿಂದ ತೆರಳಿದ್ದು, ಈ ಹಣದ ವಿಷಯವನ್ನು ಚೇತನ್ ಎಲ್ ತನ್ನ ಸ್ನೇಹಿತರಾದ ಚೆನ್ನಬೈರೇನಹಳ್ಳಿಯ ನಿವಾಸಿಗಳಾದ ಜ್ವಾಲೇಂದ್ರ (22), ಚೇತನ್ ಕೆ ಎಚ್ (23) ಹಾಗೂ 17 ವರ್ಷದ ಇನ್ನೊಬ್ಬ ಸ್ನೇಹಿತನಿಗೆ ತಿಳಿಸಿದ್ದಾನೆ." ಎಂದು ಹೇಳಿದರು.
"ಬುಧವಾರ ಸಂಜೆ 5 ಗಂಟೆ ಸಮಯಕ್ಕೆ ಬೈಕ್ ಮೆಕಾನಿಕ್ ಚೇತನ್ ಮತ್ತು ಆತನ ಸ್ನೇಹಿರಾದ ಜ್ವಾಲೆಂದ್ರ ಹಾಗೂ ಕೆ ಎಚ್ ಚೇತನ್ ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕ ಜೊತೆಗೂಡಿ, ಸತ್ಯನಾರಾಯಣ್ ಅವರ ಗ್ರಾಮಕ್ಕೆ ಹೋಗಿದ್ದಾರೆ. ಹೊಲದ ಕೆಲಸ ಮುಗಿಸಿಕೊಂಡು ಮನೆ ಬಳಿ ಕುಳಿತಿದ್ದ ಸತ್ಯನಾರಾಯಣ ಅವರನ್ನು ನಾಳ್ವರು ಸೇರಿ ಬೈಕ್ ರಿಪೇರಿ ಮಾಡಿದ ಹಣ ಕೇಳಿದ್ದಾರೆ. ಈ ಸಮಯದಲ್ಲಿ ನಾಲ್ವರ ಮಧ್ಯೆ ಗಲಾಟೆ ನಡೆದು, ನಾಲ್ವರು ಸ್ನೇಹಿತರು ಸೇರಿ ರಾಡ್ ಮತ್ತು ದೊಣ್ಣೆಯಿಂದ ಸತ್ಯನಾರಾಯಣ್ ಎಂಬ ವ್ಯಕ್ತಿಯ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ರಕ್ತದೋಕುಳಿಯಲ್ಲಿ ಬಿದ್ದ ಸತ್ಯನಾರಾಯಣ್ ಅವರನ್ನು ಕಂಡು ಮೂವರು ಅಲ್ಲಿಂದ ಎಸ್ಕೇಪ್ ಆಗಿದ್ದರು."
"ಸ್ಥಳೀಯರು ರಕ್ತಸ್ರಾವದಿಂದ ನರಳಾಡುತ್ತಿದ್ದ ಸತ್ಯನಾರಾಯಣ ಅವರನ್ನು ಕಂಡು ಪ್ರಥಮ ಚಿಕಿತ್ಸೆಗಾಗಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಅಲ್ಲಿಂದ ಶುಕ್ರವಾರ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಬೆಂಗಲೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸತ್ಯನಾರಾಯಣ ಅವರು ಸಾವನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಮೃತರು ಎಸ್ಟಿ ಸಮುದಾಯಕ್ಕೆ ಸೇರಿರುವ ಕಾರಣ, ದೌರ್ಜನ್ಯ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್ ತನಿಖೆಯ ನೇತೃತ್ವ ವಹಿಸಿಕೊಂಡಿದ್ದು, ಶೀಘ್ರದಲ್ಲಿ ತನಿಖೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗುವುದು."
"ಆರೋಪಿಗಳಲ್ಲಿ ಜ್ವಾಲೇಂದ್ರ ಹಾಗೂ ಮೃತ ಸತ್ಯನಾರಾಯಣ ಅವರು ನೆರೆಹೊರೆಯವರು ಹಾಗೂ ಸಂಬಂಧಿಕರಾಗಿದ್ದು, ಇಬ್ಬರಿಗೂ ಮೊದಲಿನಿಂದಲೂ ಸ್ವಲ್ಪ ಗಲಾಟೆ ಇತ್ತು. ಆದರೆ ಉಳಿದವರಿಗೂ ಮೃತರಿಗೂ ಬೇರೆ ಯಾವುದೇ ವಿಚಾರದಲ್ಲಿ ಗಲಾಟೆ ಇರಲಿಲ್ಲ, ಈ ಹಣದ ವಿಚಾರಕ್ಕೆ ಮಾತ್ರ ಗಲಾಟೆಯಾಗಿದೆ. ತನಿಖೆಯ ಅಧಿಕಾರಿಗಳು ಅದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಿದ್ದಾರೆ. ಅದಲ್ಲದೆ ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎನ್ನುವುದರ ಬಗ್ಗೆಯೂ ತನಿಖೆಯಾಗಲಿದೆ. ಯಾರಾದರೂ ಭಾಗಿಯಾಗಿದ್ದಲ್ಲಿ ಅವರನ್ನೂ ಬಂಧಿಸಲಾಗುವುದು" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಕಲಬುರಗಿ: ವ್ಯಕ್ತಿ ಮೇಲೆ ಹಲ್ಲೆ, ಹರಕಂಚಿ ಗ್ರಾಮದಲ್ಲಿ ಬಿಗುವಿನ ವಾತಾವರಣ; ನಾಲ್ವರ ಬಂಧನ