ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಗೂಳೂರು ಹೋಬಳಿ, ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಂಪಲ್ಲಿ ಹಾಗೂ ಮಾಡಪ್ಪಲ್ಲಿ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ಕ್ವಾರಿಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಹೀಗಾಗಿ ಪ್ರೌಢಶಾಲೆ ಹಾಗೂ ಪಿಯುಸಿ ಓದುತ್ತಿದ್ದ ಕೆಲ ಬಾಲಕರು ಅಪಾಯಕಾರಿ ಕಲ್ಲು ಕ್ವಾರಿಯಲ್ಲಿ ದುಡಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಹಲವೆಡೆ ಬಾಲಕಾರ್ಮಿಕರು ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸೂಕ್ತ ಶಿಕ್ಷಣ ಕೊರತೆ ಸೇರಿದಂತೆ ಹಲವು ಮೂಲಭೂತ ಹಕ್ಕುಗಳು ಸಿಗಬೇಕಾಗಿದೆ. ಇದನ್ನು ಕಲ್ಪಿಸಬೇಕಾದ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದರೂ ಸಹ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿವೆ. ಇನ್ನು ಈ ಭಾಗದಲ್ಲಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು, ಬಾಲಕಾರ್ಮಿಕ ಪದ್ಧತಿಗಳು ಜೀವಂತವಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇಂತಹ ಅನಿಷ್ಟ ಪದ್ಧತಿಗಳನ್ನು ತಡೆಯಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.