ಚಿಕ್ಕಬಳ್ಳಾಪುರ: ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆ ಹಾಗೂ ಪುರಾಣ ಪ್ರಸಿದ್ಧ ಗೌರಿಬಿದನೂರಿನ ವಿದುರಾಶ್ವತ್ಥ ಅಶ್ವತ್ಥ್ ನಾರಾಯಣ ಸ್ವಾಮಿ ದೇಗುಲದ ಗರ್ಭಗುಡಿಯನ್ನು ಜೀರ್ಣೋದ್ಧಾರದ ಹಿನ್ನೆಲೆ ಮೊದಲ ಬಾರಿಗೆ ಬಂದ್ ಮಾಡಲಾಗಿದೆ.
ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ದೇವಸ್ಥಾನ ಒಂದು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಐತಿಹಾಸಿಕ ಕ್ಷೇತ್ರವಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಭಕ್ತಿ ಅರ್ಪಿಸಿ ಹರಕೆಗಳನ್ನು ತೀರಿಸುತ್ತಾರೆ. ದೇವಸ್ಥಾನವನ್ನು ಕಳೆದ ಒಂದು ತಿಂಗಳಿನಿಂದ ಮುಚ್ಚಲಾಗಿದ್ದು, ದೇವರ ದರ್ಶನಕ್ಕೆ ಬಂದ ಭಕ್ತಾಧಿಗಳು ವಾಪಸ್ ತೆರಳುವಂತಾಗಿದೆ.
ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವಂತಹ ದೇವಸ್ಥಾನ ಈಗ ಜೀರ್ಣೋದ್ಧಾರ ಆಗುತ್ತಿದೆ. ಈ ದೇವಸ್ಥಾನಕ್ಕೆ ಪ್ರತಿನಿತ್ಯ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಬರುತ್ತಿರುತ್ತಾರೆ. ವಿಶೇಷವಾಗಿ ಭಾನುವಾರ ದಿನ ತಮ್ಮ ಹರಕೆಗಳನ್ನು ಸಲ್ಲಿಸಲು ಪವಿತ್ರವಾದ ದಿನವಾಗಿದ್ದು, ಭಾನುವಾರದಂದು ಸಾವಿರಾರು ಮಂದಿ ಭಕ್ತರು ಅಶ್ವತ್ಥನಾರಾಯಣಸ್ವಾಮಿ ದೇವರ ದರ್ಶನ ಪಡೆಯತ್ತಾರೆ.
ಮಾಹಿತಿ ನೀಡದ್ದಕ್ಕೆ ಭಕ್ತಾದಿಗಳ ಅಸಮಾಧಾನ
ಕಳೆದ 1 ತಿಂಗಳಿಂದ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿದೆ. ಆದರೆ ಪ್ರತಿದಿನ ನಡೆಯುವಂತೆ ಪೂಜಾ ಕೈಂಕರ್ಯಗಳಿಗೆ ಯಾವುದೇ ಅಡಚಣೆ ಇಲ್ಲ. ಪಕ್ಕದಲ್ಲೇ ಇರುವ ಯಾಗ ಶಾಲೆಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ನೀಡದ ಆಡಳಿತ ಮಂಡಳಿ ಹಾಗೂ ಸಮಿತಿಯ ಸದಸ್ಯರು ಭಕ್ತಾಧಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಈ ಕಾಮಗಾರಿ ಮುಗಿಯಲು ಇನ್ನೂ ಒಂದೂವರೆ ತಿಂಗಳು ಕಾಲಾವಕಾಶ ಬೇಕಾಗಿದೆ. ಅಲ್ಲಿಯವರೆಗೂ ಭಕ್ತಾದಿಗಳು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ. ಮಾಧ್ಯಮಗಳ ಪ್ರಶ್ನೆಯ ನಂತರ ಎಚ್ಚೆತ್ತು, ಇದೀಗ ಭಕ್ತರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ: Council Election Counting: ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ
ಭಕ್ತರು ಆತಂಕ ಪಡುವುದು ಬೇಡ. ದೇವರ ಮೂಲಸ್ಥಾನದಲ್ಲಿ ಮಾಡುತ್ತಿದ್ದಂತಹ ಅರ್ಚನೆ ಹಾಗೂ ಪೂಜಾ ವಿಧಿ ವಿಧಾನಗಳು ಮತ್ತು ನಾಗರ ಪ್ರತಿಷ್ಠಾಪನೆ ಎಲ್ಲವನ್ನೂ ಯೋಗ ಶಾಲೆಯಲ್ಲಿ ಮಾಡುತ್ತಿದ್ದೇವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಮಾಹಿತಿ ನೀಡಿದ್ದಾರೆ.