ಚಿಕ್ಕಬಳ್ಳಾಪುರ: ಗುರುವಾರವಷ್ಟೇ ನಗರ ಪ್ರಾಧಿಕಾರದ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಎಸಿಬಿ ಅಧಿಕಾರಿಗಳ ದೂರಿನ ಪ್ರತಿ ಮತ್ತೊಂದು ಟ್ವಿಸ್ಟ್ ಗೆ ಅನುವು ಮಾಡಿಕೊಟ್ಟಿದೆ.
ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ದೂರು ದಾಖಲಾಗಿರುವುದು ಅನರ್ಹ ಶಾಸಕ ಸುಧಾಕರ್ ಪಾಲಿಗೆ ಮುಳ್ಳಾದಂತಿದೆ. ಲಂಚದ ಹಣದಲ್ಲಿಯೂ ಶಾಸಕರಿಗೆ 5 ಲಕ್ಷ ರೂಪಾಯಿ ಹಣ ಕೊಡಬೇಕು ಎನ್ನುವ ಅಂಶ ಎಸಿಬಿ ಅಧಿಕಾರಿಗಳು ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ ಎನ್ನಲಾಗ್ತಿದ್ದು, ಇದು ಚರ್ಚೆಗೆ ಗ್ರಾಸವಾಗುತ್ತಿದೆ.
40% ಭೂ ಪರಿವರ್ತನೆಗೊಂಡ ನಿವೇಶನಗಳ ಮಾರಾಟಕ್ಕೆ ಉದ್ಯಮಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ 9 ಲಕ್ಷ ರೂಪಾಯಿ ಹಣಕ್ಕೆ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಅಲ್ಲದೆ, ಲಂಚದ ಹಣದಲ್ಲಿ 5 ಲಕ್ಷ ಹಣವನ್ನು ಶಾಸಕರಿಗೂ ಕೊಡಬೇಕೆಂದು, ಬೇಕಾದರೆ ಶಾಸಕರಿಗೆ ಕಾಲ್ ಮಾಡಿ 4 ಲಕ್ಷ ಕೊಡಿ ಎಂದು ಹೇಳಿದ್ದರಂತೆ. ಸದ್ಯ ಇದನ್ನೆಲ್ಲ ಉದ್ಯಮಿ ಕಾಲ್ ರೆಕಾರ್ಡ್ ಮಾಡಿದ್ದು, ಎಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು.
ಕಳೆದ ದಿನವಷ್ಟೇ ಬೆಂಗಳೂರಿನ ಉದ್ಯಮಿ ರಾಮಾಜಿನಪ್ಪ ದೂರಿನನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 3 ಲಕ್ಷ ಹಣವನ್ನು ಸ್ವೀಕರಿಸುವ ವೇಳೆ ಅಧಿಕಾರಿ ಕೃಷ್ಣಪ್ಪ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಉಪಚುನಾವಣೆಯ ಹೊಸ್ತಿಲಲ್ಲಿ ಅನರ್ಹ ಶಾಸಕನ ಹೆಸರು ಬಯಲಿಗೆ ಬಂದಿರುವ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಸಿಬಿ ದೂರಿನ ಪ್ರತಿಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.