ಚಿಕ್ಕಬಳ್ಳಾಪುರ: ಅನುಮಾನಾಸ್ಪದ ರೀತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದ ರೆಡ್ಡಿಕೆರೆ ಬಳಿ ನಡೆದಿದೆ.
ತಾಲೂಕಿನ ಎಸ್. ಎಂ. ಕೊಂಡರಾಜಹಳ್ಳಿ ಗ್ರಾಮದ ಬಾಲಕಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿಗೆ ಪ್ರೀತಿಸುವಂತೆ ಯುವಕ ಗಂಗರಾಜು (20) ಎಂಬಾತ ನಿರಂತರ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಬಾಲಕಿಯನ್ನು ಗಂಜಿಗುಂಟೆ ಬಳಿ ಸಂಬಂಧಿಕರ ಮನೆಯಲ್ಲಿ ಬಿಡಲಾಗಿತ್ತು. ನಂತರ 3 ದಿನಗಳ ಹಿಂದೆ ಬಾಲಕಿ ಕಾಣೆಯಾಗಿದ್ದಳು. ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನ ಮೇಲೆ ಫೆ.12 ರಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು.
ಓದಿ: ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಮನೆ
ಆದರೆ ಅನುಮಾನಾಸ್ಪದ ರೀತಿಯಲ್ಲಿ ತಾಲೂಕಿನ ಗಂಜಿಗುಂಟೆ ಗ್ರಾಮದ ರೆಡ್ಡಿಕೆರೆ ಬಳಿ ಬಾಲಕಿಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ನಾರಾಯಣಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.