ಚಿಕ್ಕಬಳ್ಳಾಪುರ: ಬಡತನದಲ್ಲಿ ಬೆಳೆದ ಜಿಲ್ಲೆಯ ಗೌರಿಬಿದನೂರು ಮೂಲದ ಬುಡಕಟ್ಟು ಸಮಾಜದ ಪ್ರತಿಭೆ ಇದೀಗ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ವಿಜ್ಞಾನಿಯಾಗಿದ್ದಾರೆ. ನಗಿರೆಗೆರೆ ಹೋಬಳಿಯ ನಡುವಿನ ತಾಂಡ ಗ್ರಾಮದ ನಿವಾಸಿಗಳಾದ ನಾಗೇನಾಯಕ್ ಹಾಗೂ ಲಕ್ಷ್ಮೀಬಾಯಿ ದಂಪತಿಯ ನಾಲ್ವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಲ್ಲಿ ಕೊನೆಯ ಮಗನಾದ ಓಂ ಪ್ರಕಾಶ್ ನಾಯಕ್ ಯಶಸ್ಸು ಸಾಧಿಸಿದ್ದಾರೆ.
ಓಂ ಪ್ರಕಾಶ್ ನಾಯಕ್ ಅವರು 1 ರಿಂದ 5 ರವರೆಗಿನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಡುವಿನ ತಾಂಡ ಗ್ರಾಮದಲ್ಲಿಯೂ, 6 ರಿಂದ 10 ರವರೆಗೂ ಜಿ ಕೊತ್ತೂರಿನ ಶಾರದಾ ದೇವಿ ವಿದ್ಯಾಶಾಲೆಯಲ್ಲೂ, ಬೆಂಗಳೂರಿನ ರೇಣುಕಾಚಾರ್ಯ ಪಿಯು ಕಾಲೇಜಿನಲ್ಲಿ ಪಿಯು ವ್ಯಾಸಂಗವನ್ನೂ ಹಾಗು ಪದವಿ ವಿದ್ಯಾಭ್ಯಾಸವನ್ನು ಜಿಕೆವಿಕೆಯಲ್ಲಿ ಮುಗಿಸಿದ್ದಾರೆ. ಇದೀಗ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಡಿ ಕೃಷಿ ಸಂಶೋಧನೆಯಲ್ಲಿ ಸೇವೆ ಸಲ್ಲಿಸಲು ಪ್ರವೇಶ ಮಟ್ಟದ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ಓಂ ಪ್ರಕಾಶ್ ಸದ್ಯ ಇಂಡಿಯನ್ ಅಗ್ರಿಕಲ್ಚರ್ ಇನ್ಸ್ಟಿಟ್ಯೂಟ್ನಲ್ಲಿ ಪಿಹೆಚ್‌ಡಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 2020ರಲ್ಲಿ ಪ್ರಿಲಿಮ್ಸ್, ಮೈನ್ಸ್, ಇಂಟರ್ವ್ಯೂನಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದು, ದೇಶದಲ್ಲಿ 12ನೇ ಸ್ಥಾನ ಪಡೆದುಕೊಂಡಿದ್ದರು. ಇನ್ನು ಎರಡು ತಿಂಗಳ ತರಬೇತಿಯ ತರುವಾಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ವಿದ್ಯಾಭ್ಯಾಸ ಸಲುವಾಗಿ ಹಳ್ಳಿಯಿಂದ ದಿಲ್ಲಿಗೆ ಹೋದರೂ ಅಲ್ಲಿನ ಭಾಷೆ, ಅಧಿಕ ಚಳಿಗಾಳಿಯೊಂದಿಗೆ ಹೊಂದಾಣಿಕೆ ಸುಲಭದ ಮಾತಾಗಿರಲಿಲ್ಲ. ಆದರೂ ಗುರಿ ಬಿಡದ ಓಂ ಪ್ರಕಾಶ್ ನಾಯಕ್ ಕೊನೆಗೂ ಬದುಕಿನ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಾಧನೆಗೆ ತಂದೆಯೇ ಪ್ರೇರಣೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮಲೆನಾಡಿನ ಪ್ರತಿಭೆ ಅದಿತಿ ರಾಜೇಶ್ ಆಯ್ಕೆ