ಬೆಂಗಳೂರು: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿಗೆ ಜೆಡಿಎಸ್ ಪಕ್ಷದಿಂದ ಬೆಂಬಲ ಸಿಕ್ಕಿದೆ. ಆದರೆ, ಅವರ ಕ್ಷೇತ್ರದಲ್ಲಿಯೇ ಅವರಿಗೆ ಪರ ವಿರೋಧಿ ಮುಖಂಡರು ಇದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂತಿಮ ಅನ್ನೋ ಸುದ್ದಿ ಯಾವಾಗ ಹಬ್ಬಿತೋ ಅಂದಿನಿಂದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಮತ್ತು ಜೆಡಿಎಸ್ ಮುಖಂಡರ ನಡುವೆ ಒಂದಲ್ಲೊಂದು ಮನಸ್ತಾಪ ಉಂಟಾಗುತ್ತಿದೆ.
ಆರಂಭದಲ್ಲಿ ವೀರಪ್ಪಮೊಯ್ಲಿ ನಾಮಪತ್ರ ಸಲ್ಲಿಸುವ ತನಕ ಯಾವುದೇ ಜೆಡಿಎಸ್ ಮುಖಂಡರು ಮೊಯ್ಲಿಯವರಿಗೆ ಸಾಥ್ ನೀಡಿರಲಿಲ್ಲ. ಅದ್ದರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ಗೆ ಮೊಯ್ಲಿ ಕಂಡರೆ ಆಗುವುದಿಲ್ಲ ಅನ್ನೋದು ಗೊತ್ತಾಗಿದೆ. ಅದಲ್ಲದೇ ಸ್ವತಃ ಜೆಡಿಎಸ್ನ ಜಿಲ್ಲಾಧ್ಯಕ್ಷ ಕೂಡ ಬಹಿರಂಗವಾಗಿ ವೀರಪ್ಪಮೊಯ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ರು.
ಮೊಯ್ಲಿಗಿಲ್ಲ ಜೆಡಿಎಸ್ ಜಿಲ್ಲಾಧ್ಯಕ್ಷರ ಪ್ರಚಾರ:
ಒಂದು ಕಡೆ ಶಾಸಕ ನಿಸರ್ಗ ನಾರಾಯಣಸ್ವಾಮಿ ವೀರಪ್ಪಮೊಯ್ಲಿ ಜೊತೆ ಜಂಟಿ ಪ್ರಚಾರ, ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರೆ, ಇತ್ತ ಜೆಡಿಸ್ನ ಜಿಲ್ಲಾಧ್ಯಕ್ಷ ಮುನೇಗೌಡ ನಾಪತ್ತೆಯಾಗಿದ್ದಾರೆ. ಯಾರ ಕೈಗೂ ಸಿಗದ ಅವರು, ಯಾವುದೇ ಪ್ರಚಾರವಾಗಲಿ, ಸುದ್ದಿಗೋಷ್ಠಿಯಲ್ಲಾಗಲಿ ಕಾಣಿಸುತ್ತಿಲ್ಲ.
ಮಾಧ್ಯಮಗಳು ಇದರ ಕುರಿತು ಕೇಳಿದ್ರೆ, ನಮ್ಮ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರು ಏನು ಹೇಳುತ್ತಾರೆ ಅದನ್ನು ಪಾಲೀಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಅದು ಕೇವಲ ಬಾಯಿ ಮಾತಿನಲ್ಲಿದೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ. ದಿನದಿಂದ ದಿನಕ್ಕೆ ಚುನಾವಣೆ ಕಾವು ಜೋರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಬೇಕಾದರೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಬಹಳ ಮುಖ್ಯವಾಗುತ್ತಾರೆ. ಆದರೆ, ಇದೀಗ ಮೊಯ್ಲಿ ವಿರುದ್ಧ ಜೆಡಿಎಸ್ನಲ್ಲಿ ಕೆಲವು ಮುಖಂಡರು ಅಸಮಾಧಾನಗೊಂಡಿದ್ದು, ಚುನಾವಣೆಯಲ್ಲಿ ಯಾವ ಪರಿಣಾಮ ಬೀರುತ್ತದೆ ಅನ್ನೋದನ್ನು ನೋಡಬೇಕು.