ಚಿಕ್ಕಬಳ್ಳಾಪುರ: ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿ ಅಂಗವಾಗಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲಾ ತಾಲೂಕಿನ ಕೇಂದ್ರಗಳಲ್ಲಿಯೂ ಮಹಿಳೆಯರಿಗಾಗಿಯೇ ವಿಶೇಷವಾಗಿ ತೆರೆದಿರುವ ಕೊರೊನಾ ಲಸಿಕೆ ಪಿಂಕ್ ಬೂತ್ಗಳನ್ನು ಜಿಲ್ಲಾಧಿಕಾರಿ ಆರ್.ಲತಾ ಉದ್ಘಾಟಿಸಿದರು.
ಕೊರೊನಾ ಪಿಂಕ್ ಬೂತ್ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕೊರೊನಾ ಲಸಿಕಾ ಪಿಂಕ್ ಬೂತ್ಗಳನ್ನು ತೆರೆಯಲಾಗಿದೆ. ಈ ಮೂಲಕ ಮಹಾತ್ಮರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಪ್ರತೀ ದಿನ 7ರಿಂದ 8 ಸಾವಿರಕ್ಕೂ ಹೆಚ್ಚು 45 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ 1.2 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದ 1.80 ಲಕ್ಷ 45 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್ 14ರವರೆಗೆ ನಡೆಯುವ ಕೋವಿಡ್ ಲಸಿಕಾ ಉತ್ಸವದಲ್ಲಿ ಒಟ್ಟು 91 ಲಸಿಕಾ ಕೇಂದ್ರಗಳ ಮೂಲಕ ಲಸಿಕೆ ಹಾಕಲಾಗುವುದು.
ಅಲ್ಲದೆ ಏಪ್ರಿಲ್ 12ರಿಂದ ಹೆಚ್ಚು ಜನ ಸೇರಿ ಒಂದೆಡೆ ಕೆಲಸ ಮಾಡುವ ಸರ್ಕಾರಿ ಕಚೇರಿಗಳಲ್ಲಿಯೇ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಆ ಕಚೇರಿಯಲ್ಲಿನ ಅಧಿಕಾರಿ, ಸಿಬ್ಬಂದಿ ಹಾಗೂ ಆಯಾ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಲಸಿಕೆ ಹಾಕಲಾಗುವುದು. ಇದರ ಪ್ರಯುಕ್ತ ಸೋಮವಾರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ನ್ಯಾಯಾಲಯದ ಅಧಿಕಾರಿ, ಸಿಬ್ಬಂದಿಗೆ, ವಕೀಲರಿಗೆ, ನ್ಯಾಯಾಲಯಕ್ಕೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರಿಗೆ ಲಸಿಕೆ ಹಾಕಲಾಗುವುದು.
ಆದ್ದರಿಂದ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿ, ವಕೀಲರು ತಮ್ಮ ಕುಟುಂಬ ಸಮೇತ 45 ವರ್ಷ ಮೇಲ್ಪಟ್ಟವರು ಬಂದು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕೋರಿದರು.
ಏಪ್ರಿಲ್ 14ರಂದು ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರ ನಗರದ 31ನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು.