ಚಿಕ್ಕಬಳ್ಳಾಪುರ: ಕಳೆದ ಮೂರು ತಿಂಗಳಿಂದ ಕುಡಿಯುವ ನೀರು ಬಿಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಎಂದು ಆರೋಪಿಸಿ, ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಚೇಳೂರಿನಲ್ಲಿ ನಡೆದಿದೆ.
ಚೇಳೂರಿನ 2ನೇ ವಾರ್ಡ್ನ ಸುಭಾಷ್ ನಗರ ಬಡಾವಣೆಯಲ್ಲಿ ಕಳೆದ 3 ತಿಂಗಳಿನಿಂದ ಕುಡಿಯುವ ನೀರು ಸರಬರಾಜು ಮಾಡುವುದರಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ಹೇಳಿದರೂ ಕೈಕಟ್ಟಿ ಕುಳಿತ್ತಿದ್ದು, ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಸದ್ಯ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಕೆ.ಎನ್.ಹರೀಶ್, ಕರ ವಸೂಲಿಗಾರ ಪಿ.ಎನ್.ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ವೆಂಕಟೇಶ್ ಅವರು ಬಂದು ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆದರು.