ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ತಾಲೂಕಿನ ತಿಪ್ಪೇನಹಳ್ಳಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಸಾರಿಗೆಯೂ ಸೇರಿ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರುನಮ್ ಭರವಸೆ ನೀಡಿದರು.
ಸರ್ಕಾರಿ ಐಟಿಐ ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿದ ಅವರು, ಈಗಾಗಲೇ ಕಾಲೇಜಿನಲ್ಲಿ ಕುಡಿಯುವ ನೀರು ಮತ್ತು ಬಸ್‌ನ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದಾರೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಕಾಲೇಜಿನ ಪ್ರಾಂಗಣದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ, ಆಟವಾಡಲು ಮೈದಾನವನ್ನು ಅಭಿವೃದ್ಧಿಗೊಳಿಸಲು ಅಗತ್ಯ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು.
ಇದೇ ವೇಳೆ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೊಂದಿಗೆ ಮುಕ್ತ ಸಂವಾದ ನಡೆಸಿದರು. ಆನ್‍ಲೈನ್ ಪರೀಕ್ಷೆ ಬರೆಯಲು ಸೂಚನೆ ನೀಡಿರುವುದರಿಂದ ಕಾಲೇಜಿನಲ್ಲಿ ಅಗತ್ಯ ಗಣಕಯಂತ್ರದ ಸೌಲಭ್ಯ ಇಲ್ಲ ಎಂದು ಪ್ರಾಂಶುಪಾಲರು, ಸಿಇಒ ಅವರಿಗೆ ತಿಳಿಸಿದರು.
ಈ ಸಂದಂರ್ಭದಲ್ಲಿ ತಾ.ಪಂ. ಇಒ ಶಿವಕುಮಾರ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಗ್ರಾಮ ಪಂಚಾಯತ್ ಪಿಡಿಒ ಡಿ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.