ಚಿಕ್ಕಬಳ್ಳಾಪುರ/ ಚಿಂತಾಮಣಿ: ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ನೆರೆಗೆ ರಾಜ್ಯವೇ ತತ್ತರಿಸಿದರೂ ಕೇಂದ್ರ ಸರ್ಕಾರ ಪರಿಹಾರ ನೀಡಲು ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಕಿಡಿಕಾರಿದ್ದಾರೆ.
ಚಿಂತಾಮಣಿ ಕ್ಷೇತ್ರದ ಶಾಸಕ ಕೃಷ್ಣಾರೆಡ್ಡಿ ಅವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಕೈವಾರ ಕ್ಷೇತ್ರಕ್ಕೆ ಆಗಮಿಸಿದ್ದ ದೇವೇಗೌಡರು, ರಾಜ್ಯದಲ್ಲಿನ ನೆರೆ ಹಾಗೂ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ರು. ಮೊನ್ನೆ ಬಿಡುಗಡೆಯಾಗಿರುವ 1200 ಕೋಟಿ ಪರಿಹಾರದ ಹಣವು ಸಹ ಕುಮಾರಸ್ವಾಮಿ ಸರ್ಕಾರದಲ್ಲಿ ಕೊಡಗು ಹಾಗೂ ಸುತ್ತಮುತ್ತ ಉಂಟಾಗಿದ್ದ ನೆರೆ ಸಂಬಂಧ ಸಲ್ಲಿಸಿದ್ದ ಮನವಿಯ ಹಣವಾಗಿದೆ. ಉತ್ತರ ಕರ್ನಾಟಕದಲ್ಲಿ ಆದ ನೆರೆಗೆ ಯಾವುದೇ ಪರಿಹಾರ ನೀಡಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಕಿಡಿಕಾರಿದರು.
ಇದರ ಸಲುವಾಗಿಯೇ ಕೇಂದ್ರದ ಧೋರಣೆಯನ್ನು ಖಂಡಿಸಿ ಇದೇ ಅಕ್ಟೋಬರ್ 10ರಂದು ನೆರೆ ಹಾಗೂ ಬರ ಸಂತ್ರಸ್ತರ ಪರಿಹಾರಕ್ಕಾಗಿ ಫ್ರೀಡಂ ಪಾರ್ಕ್ನಿಂದ ಗಾಂಧಿ ಪ್ರತಿಮೆಯವರಿಗೂ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.