ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸುತ್ತಿದ್ದ ಚಾಲಕನೋರ್ವ ಎಎಸ್ಐ ದಂಡ ವಿಧಿಸಿದ್ದರಿಂದ ಅವರ ವಿರುದ್ಧವೇ ಆಕ್ರೋಶಗೊಂಡು ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಕಾರು ಚಾಲಕ ರವಿ ಎಂಬಾತ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತನ್ನ ತಾಯಿಯನ್ನು ಕರೆ ತರುವ ಆತುರದಲ್ಲಿ ಸೀಟ್ ಬೆಲ್ಟ್ ಹಾಕುವುದನ್ನು ಮರೆತಿದ್ದ ಎನ್ನಲಾಗ್ತಿದೆ. ಇದೇ ವೇಳೆ ಎಎಸ್ಐ ರಾಮಚಂದ್ರಪ್ಪ ವಾಹನ ತಪಾಸಣೆ ಮಾಡುವಾಗ ಕಾರನ್ನು ನಿಲ್ಲಿಸಿ ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುತ್ತಿದ್ದಿಯಾ ಎಂದು 500 ರೂ. ದಂಡ ಪಾವತಿಸುವಂತೆ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಚಾಲಕ ರವಿಯು ಎಎಸ್ಐ ಮೇಲೆ ಹಲ್ಲೆಗೆ ಮುಂದಾಗಿದ್ದ ಎಂದು ದೂರಲಾಗಿದೆ.
ಘಟನೆ ವೇಳೆ ಚಾಲಕನ ಜೊತೆ ಸಾರ್ವಜನಿಕರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಎಎಸ್ಐ ರಾಮಚಂದ್ರಪ್ಪ ಸಾರ್ವಜನಿಕರಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಸಮಾಧಾನ ಮಾಡಿ ಕಳಿಸಿದ್ದಾರೆ. ಚಾಲಕ ತನ್ನ ತಪ್ಪನ್ನು ತಿಳಿದು ಎಎಸ್ಐಗೆ ಕ್ಷಮೆ ಕೇಳಿದ್ದಾನೆ.