ಚಿಕ್ಕಬಳ್ಳಾಪುರ: ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ನಾನು ನಾಮಪತ್ರ ಸಲ್ಲಿಸಲು ಆಗುವುದಿಲ್ಲ. ಅಂತಿಮ ತೀರ್ಪು ಬರುವವರೆಗೂ ನಾವು ಕಾಯಬೇಕಿದೆ ಎಂದು ಅನರ್ಹ ಶಾಸಕ ಸುಧಾಕರ್ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರ ಜೊತೆಗೆ ಡಿಕೆಶಿ ಚರ್ಚೆ ಮಾಡಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಡಿಕೆಶಿ ಸರಿಯಾಗಿಯೇ ಹೇಳಿದ್ದಾರೆ. ನನ್ನನ್ನು ಆ ಪಕ್ಷದಿಂದ ತೆಗೆದುಹಾಕಿದ್ದಾರೆ. ಹೀಗಾಗಿ ಅವರು ನನ್ನನ್ನು ಗೆಲ್ಲಿಸಿ ಅಂತಾ ಹೇಳೋಕ್ಕೆ ಆಗುತ್ತಾ? ನಾನು ಅದನ್ನು ಅಪೇಕ್ಷೆ ಕೂಡ ಮಾಡಲ್ಲ. ಕಾಂಗ್ರೆಸ್ ಪಕ್ಷದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಬುಧವಾರ ತೀರ್ಪು ಬರಲಿ. ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕನಿಗೆ ಟಾಂಗ್...
ಡಾ. ಕೆ. ಸುಧಾಕರ್ ಒಬ್ಬ ಚಂಡಾಲ ರಾಜಕಾರಣಿ ಎಂದು ಹೇಳಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್ . ಎಂ. ಮುನಿಯಪ್ಪಗೆ ಸುಧಾಕರ್ ಟಾಂಗ್ ನೀಡಿದ್ದಾರೆ. ಕೀಳಾಗಿ ಮಾತನಾಡುವ ವ್ಯಕ್ತಿತ್ವವನ್ನು ಮುನಿಯಪ್ಪ ಹೊಂದಿದ್ದಾರೆ. ಅವರ ಸಂಸ್ಕಾರ, ನಾಲಿಗೆ, ಸಂಸ್ಕೃತಿ ಅವರ ಹಿನ್ನೆಲೆ ತೋರಿಸುತ್ತದೆ. ಅವರ ಬಗ್ಗೆ ಏನೂ ಹೇಳಬೇಕಿಲ್ಲ. ಅವರ ಮೂಲ ನೋಡಬೇಕು. ಅವರ ಮಾತು ಅವರ ಗುಣಕ್ಕೆ ಹಿಡಿದ ಕನ್ನಡಿ ಎಂದು ಟಾಂಗ್ ಕೊಟ್ಟಿದ್ದಾರೆ.