ಚಿಕ್ಕಬಳ್ಳಾಪುರ: ಮನೆಯ ಮುಂದೆ ಕಮಲದ ರಂಗೋಲಿ ಹಾಕಿದರೆ 500 ರೂ. ಕುಕ್ಕರ್, ಮಿಕ್ಸಿಗಳನ್ನು ಬಿಜೆಪಿ ಅಭ್ಯರ್ಥಿ ಸುಧಾಕರ್ ಮತದಾರರಿಗೆ ನೀಡಿ, ವಾಮಮಾರ್ಗದಿಂದ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಎಸ್ಪಿ ಪಕ್ಷದ ಅಭ್ಯರ್ಥಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ಪಿ ಪಕ್ಷದ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನಾನು ಉಪ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಲಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತೇನೆ. ಕೃಷ್ಣಾ ನದಿ ನೀರನ್ನು ಬಾಗೇಪಲ್ಲಿಯಿಂದ ಜಿಲ್ಲೆಗೆ ತರಲಾಗುವುದು. ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡಿ, ನೂತನ ಕ್ಷೇತ್ರವನ್ನಾಗಿ ಮಾಡುತ್ತೇವೆಂದು ಭರವಸೆ ನೀಡಿದರು.
ಬಿಜೆಪಿ ಅಭ್ಯರ್ಥಿ ಸುಧಾಕರ್ ಚುನಾವಣೆಯನ್ನು ಮಕ್ಕಳ ಆಟ ಎಂದು ತಿಳಿದುಕೊಂಡಿದ್ದಾರೆ. ಜನನಾಯಕ ಎಲ್ಲಾ ವರ್ಗದವರಿಗೂ ನ್ಯಾಯ ಕೊಡಿಸಬೇಕು. ಆದರೆ ರಂಗೋಲಿ ಸ್ಫರ್ಧೆ ಮಾಡಿ ಕುಕ್ಕರ್ ಕೊಡುವುದು, 50 ಸಾವಿರ, 2 ಲಕ್ಷ ಕೊಡ್ತೀನಿ ಎಂದು ಹೇಳುವುದು ವಾಮಮಾರ್ಗ ಎಂದು ಆರೋಪ ಮಾಡಿದ್ರು.
ಇನ್ನು 6 ವರ್ಷಗಳ ಕಾಲ ಜನನಾಯಕರಾಗಿದ್ದು ಯಾವ ಸಾಧನೆಯನ್ನು ಮಾಡಿಲ್ಲ. ಸಾಕಷ್ಟು ಗಿಮಿಕ್ಗಳ ಮುಖಾಂತರ ಮತದಾರರನ್ನು ಸೆಳೆಯುತ್ತಿದ್ದಾರೆ. ಈ ರೀತಿಯ ಗಿಮಿಕ್ಗಳನ್ನು ಬಿಡಬೇಕೆಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಎಚ್ಚರಿಕೆ ನೀಡಿದ್ದಾರೆ.