ಚಿಕ್ಕಬಳ್ಳಾಪುರ: ಕೆಸಿ ವ್ಯಾಲಿ ನೀರನ್ನು ಪೈಪ್ ಲೈನ್ ಮೂಲಕ ಹರಿಸಿದರೆ ಒಳ್ಳೆಯ ಕಮಿಷನ್ ಸಿಗುತ್ತೆ ಎಂಬ ಉದ್ದೇಶದಿಂದ ಮಂತ್ರಿಗಳು ಈ ಯೋಜನೆ ಮಾಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆಯ ಕೊನೆ ದಿನವಾದ ನಿನ್ನೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಎರಡು ಮೂರು ಬಾರಿ ಮೂರನೇ ಹಂತದ ಶುದ್ಧೀಕರಣದ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆದರೆ ನನಗೆ ಬಂದ ಮಾಹಿತಿ ಪ್ರಕಾರ ಎಲ್ಲಾ ಯಂತ್ರಗಳೂ ಕೆಟ್ಟಿವೆ. ಪೈಪ್‌ಲೈನ್ ಎಳೆಯುವಾಗ ಒಳ್ಳೆ ಕಮಿಷನ್ ಸಿಗುತ್ತದೆ. ಇದು ನೀರು ಕೊಡುವ ಯೋಜನೆಯೇನೂ ಇಲ್ಲ. ಅವರಿಗೆ ಜೇಬು ತುಂಬಿಸಿಕೊಳ್ಳಬೇಕು ಅಷ್ಟೇ ಎಂದರು.
ಚುನಾವಣೆಗಿಂತ ಮೊದಲು ಶುದ್ಧ ನೀರು ತರುವುದಾಗಿ 23 ಸಾವಿರ ಕೋಟಿ ರೂ ಮೌಲ್ಯದ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಅದು ಯಾವ ಚುನಾವಣೆಗಿಂತ ಮೊದಲು ಎಂಬುದನ್ನು ಹೇಳಿಲ್ಲ. ಯಾಕೆಂದರೆ ಈ ಯೋಜನೆಗೆ ಇದುವರೆಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೂಡ ಆಗಿಲ್ಲ. ಇದೇ ರೀತಿ ದೇವರಾಜ ದುರ್ಗದ ಬಳಿ ಜಲಾಶಯ ಕಟ್ಟುತ್ತೇವೆ, ಕೊರಟಗೆರೆ ಬಳಿ ಡ್ಯಾಂ ಕಟ್ಟುತ್ತೇವೆ ಎಂದಿದ್ದರು. ಕೋಲಾರಕ್ಕೆ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ, ಅದು ಸಾಧ್ಯ ಆಗುತ್ತಾ ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಪಂಚರತ್ನ ಯಾತ್ರೆ ಬಗ್ಗೆ ಮಾತನಾಡುತ್ತಾ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಬಹುತೇಕ ಯಶಸ್ವಿಯಾಗಿದೆ. ರಥಯಾತ್ರೆಗೆ ಜನತೆಯ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿ ಸಿಕ್ಕಿದ್ದು, ರಥಯಾತ್ರೆಯ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಕೋಲಾರ ಚಿಕ್ಕಬಳ್ಳಾಪುರ ಜನತೆ ಕೊಟ್ಟ ಉತ್ತಮ ಸಂದೇಶವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಸಾಕಷ್ಟು ಪರದಾಟ ನಡೆಸುತ್ತಿದ್ದಾರೆ. ಮಕ್ಕಳಿಗೆ ಸೈಕಲ್ ವಿತರಣೆ, ಬಸ್ ಸೌಕರ್ಯ ಇಲ್ಲ. ಇದರಿಂದ 2022-23 ಸಾಲಿನಲ್ಲಿ ಶಾಲೆಗಳ ಹಾಜರಾತಿ 1.62 ಸಾವಿರ ಕಡಿತವಾಗಿದೆ. ಹಳ್ಳಿಗಳಲ್ಲಿ ಶಾಲೆಗಳಿಗೆ ಕಳುಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸರ್ಕಾರ ಹೊಸ ನಿಯಮಗಳನ್ನು ತರಲಾಗುವುದು ಎಂದು ಹೇಳುತ್ತಿದೆ. ಆದರೆ ಯಾವುದು ಎಂದು ದೇವರಿಗೆ ಗೊತ್ತಾಗಬೇಕು ಎಂದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ಕನ್ನಡಿಗರನ್ನು 'ಜಲದಾಸ್ಯ'ಕ್ಕೆ ದೂಡುವುದನ್ನು ಸಹಿಸುವುದಿಲ್ಲ: ಹೆಚ್ಡಿಕೆ