ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಬಿಜೆಪಿ ಪಕ್ಷ ಸೋಲುವುದಕ್ಕೆ ಮಾಜಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇರವಾಗಿ ಆರೋಪಿಸಿದ್ದಾರೆ. ಚಿಕ್ಕಬಳ್ಳಾಪುರ ಪ್ರಶಾಂತ ನಗರದಲ್ಲಿ ಇಂದು ತಮ್ಮ ನೂತನ ಕಚೇರಿಯ ಪೂಜೆ ನೆರವೇರಿಸಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ದ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಡಾ.ಕೆ.ಸುಧಾಕರ್ ಚುನಾವಣೆ ವೇಳೆ ತರಾತುರಿಯಲ್ಲಿ ಕ್ಷೇತ್ರದ ಜನರಿಗೆ ಹಕ್ಕುಪತ್ರಗಳ ವಿತರಣೆ ಮಾಡಿದರು. ಇದರಲ್ಲಿ ಅಕ್ರಮ ಎಸಗಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ವಸತಿ ಸಚಿವ ಜಮೀರ್ ಅಹಮದ್ ಸೂಚಿಸಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಸುಧಾಕರ್ ಉದ್ಧಟತನದಿಂದಲೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಹೀಗೆಂದು ಅವರ ಪಕ್ಷದೊಳಗೆ ಚರ್ಚೆ ಆಗಿರೋದು ಬಹಿರಂಗ ಆಗಿದೆ. ಆದ್ದರಿಂದ ಸ್ವಾರ್ಥಿಗಳು ಹಾಗೂ ಪಕ್ಷದ್ರೋಹಿಗಳನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮೊಯ್ಲಿ ತಿರುಗೇಟು ನೀಡಿದರು. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡೋದು ವಿರೋಧ ಪಕ್ಷಗಳ ಕೆಲಸ. ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೆ ಎಂದು ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೆಲುವಿನ ರುಚಿ ಕಂಡಿರುವ ಮೊಯಿಲಿ, ಮೂರನೇ ಬಾರಿ ಸ್ಪರ್ಧೆ ಮಾಡಿ ಗೆಲುವು ಸಾಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳ ಕ್ರೋಢೀಕರಣ ಮಾಡಲು ತಯಾರಿ ನಡೆಸಿದ್ದಾರೆ. ಜನರ ಜೊತೆ ಸಂಪರ್ಕ ಸಾಧಿಸಲು ಚಿಕ್ಕಬಳ್ಳಾಪುರ ಪ್ರಶಾಂತ ನಗರದಲ್ಲಿ ಇಂದು ನೂತನ ಕಚೇರಿ ತೆರೆದಿದ್ದು, ಬಿಜೆಪಿಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಕಾಂಗ್ರೆಸ್‌ನಿಂದ ನಾನು ಸ್ಪರ್ಧೆ ಮಾಡುವೆ ಎಂಬ ಸುಳಿವು ನೀಡಿದ್ದಾರೆ.
ಶಕ್ತಿ ಯೋಜನೆ ಚಾಲನೆ ವಿಚಾರ: ಅಧಿಕಾರದ ಗದ್ದುಗೆ ತಂದು ಕೊಟ್ಟ ಗ್ಯಾರಂಟಿಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ವಿಭಿನ್ನ ರೀತಿಯಲ್ಲಿ ಚಾಲನೆ ನೀಡಲು ಮುಂದಾಗಿದೆ. ಜೂನ್ 11ರಂದು ಬಹುನಿರೀಕ್ಷಿತ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವದಕ್ಕೆ ಸಿಎಂ ಸಿದ್ದರಾಮಯ್ಯ ಸ್ವತಃ ಕಂಡಕ್ಟರ್ ಆಗಲಿದ್ದಾರೆ. ಶಕ್ತಿ ಯೋಜನೆಗೆ ವಿಶೇಷ ರೂಪದಲ್ಲಿ ಚಾಲನೆ ಕೊಡಲು ಮುಂದಾದ ಸಿಎಂ, ಭಾನುವಾರ ಬಿಎಂಟಿಸಿ ಕಂಡಕ್ಟರ್ ಆಗಿ ಮಹಿಳಾ ಪ್ರಯಾಣಿಕರಿಗೆ ಸಾಂಕೇತಿಕವಾಗಿ ಉಚಿತ ಬಸ್ ಟಿಕೆಟ್ ನೀಡಲಿದ್ದಾರೆ. ಜೂನ್ 11 ರಂದು ಮೆಜೆಸ್ಟಿಕ್‌ನಿಂದ ವಿಧಾನಸೌಧ ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಟಿಕೆಟ್ ನೀಡಲಿದ್ದಾರೆ. ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ.
ಇದನ್ನೂಓದಿ: ಲೋಕಸಭೆ ಚುನಾವಣೆ: ತುಮಕೂರು ಬಿಜೆಪಿ ಟಿಕೆಟ್ಗೆ ವಿ.ಸೋಮಣ್ಣ, ಮುದ್ದಹನುಮೇಗೌಡ ನಡುವೆ ಪೈಪೋಟಿ