ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಡಯಾಗ್ನೋಸ್ಟಿಕ್ ಪಿವಿಆರ್ ಸ್ಕ್ಯಾನಿಂಗ್ ಸೆಂಟರ್ ನಡೆಸಲು ದೀಪಕ್ ಎಂಬವರಿಗೆ ಚಿಕ್ಕಬಳ್ಳಾಪುರ ಡಿಹೆಚ್ಓ ನಿರಾಕ್ಷೇಪಣಾ ಪತ್ರ ನೀಡಿದ್ದಾರೆ. ಆದರೆ ಪಿಸಿಪಿಎನ್ಡಿಟಿ (Pre-Conception and Pre-Natal Diagnostic Techniques Act) ನಿಯಮಗಳನ್ನು ಗಾಳಿಗೆ ತೂರಿ ವೆಂಕಟೇಶ್ ಎಂಬ ನಕಲಿ ವೈದ್ಯರು ಸ್ಕ್ಯಾನಿಂಗ್ ಸೆಂಟರ್ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಹೆಚ್ಓ ಮಹೇಶ್ ಅವರ ಮಾರ್ಗದರ್ಶನದಂತೆ ಟಿಹೆಚ್ಓ ಮಂಜುಳಾ ಅವರು ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ದೂರು ನೀಡಿದ್ದು, ಡಿಹೆಚ್ಓ ಪರಿಶೀಲಿಸಲು ಹೇಳಿದ ಕಾರಣ ಬಂದು ಪರಿಶೀಲಿಸಿದ್ದೇನೆ. ನಾನು ಬಂದಾಗ ಸೆಂಟರ್ ಖಾಲಿಯಾಗಿತ್ತು. ಸ್ಕ್ಯಾನಿಂಗ್ ಮೆಶಿನ್ ಡಾ.ದೀಪಕ್ ಹೆಸರಲ್ಲಿದ್ದು, ಇಲ್ಲಿ ಬಂದಾಗ ಅವರಿರಲಿಲ್ಲ. ಅವರ ಬದಲಾಗಿ ಬೇರೆ ಡಾಕ್ಟರ್ ಸ್ಕ್ಯಾನ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸ್ಕ್ಯಾನ್ ಮಾಡಿರುವ ಎಲ್ಲಾ ರಿಪೋರ್ಟ್, ಸಾಕ್ಷ್ಯಗಳನ್ನು ಸಂಗ್ರಹಿಸಿ ನೋಡುತ್ತೇವೆ ಎಂದರು.
ರಿಸೆಪ್ಷನಿಸ್ಟ್ ಹೇಳುವ ಪ್ರಕಾರ ಡಾ. ದೀಪಕ್ ರಜೆಯಲ್ಲಿದ್ದು, ಡಾ. ವೆಂಕಟೇಶ್ ಡ್ಯೂಟಿಯಲ್ಲಿದ್ದಾರೆ. ಆದರೆ ನಾವು ಬಂದಾಗ ಇಲ್ಲಿ ಯಾವ ಡಾಕ್ಟರ್ ಕೂಡ ಇರಲಿಲ್ಲ. ಡಾ. ವೆಂಕಟೇಶ್ ಅವರ ಹೆಸರು ಇಲ್ಲಿ ರಿಜಿಸ್ಟರ್ ಆಗಿದೆಯಾ? ಆಗಿಲ್ಲ ಅಂದರೆ ಯಾಕೆ ಆಗಿಲ್ಲ, ರಿಜಿಸ್ಟರ್ ಆಗದೆ ಅವರು ಇಲ್ಲಿ ಹೇಗೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ವಿವರಣೆ ನೀಡುವಂತೆ ಪಿಸಿಪಿಎನ್ಡಿಟಿ ನಿಯಮಗಳ ಅಡಿಯಲ್ಲಿ ನೋಟಿಸ್ ನೀಡುತ್ತೇವೆ. ಅವರು ನೀಡುವ ಉತ್ತರಗಳನ್ನು ಆಧರಿಸಿ ಅದರ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಡಾ. ವೆಂಕಟೇಶ್ ಅವರು ಸ್ಕ್ಯಾನಿಂಗ್ ಮಾಡಿ, ಸಹಿ ಹಾಕಿ ರಿಪೋರ್ಟ್ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಸಹಿ ಬಗ್ಗೆ ನಾವು ಪರೀಕ್ಷಿಸಬೇಕು. ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಪ್ರತಿಭಟನೆ