ಬಾಗೇಪಲ್ಲಿ : ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಭಾಗದ ಜನರ ಕುಂದುಕೊರತೆಗಳು, ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಕೆ ಆರ್ ನರೇಂದ್ರ ಬಾಬು ಅವರು ಸೂಚಿಸಿದರು.
ಬಾಗೇಪಲ್ಲಿ ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಭೇಟಿ ನೀಡುವ ಬಗ್ಗೆ ಮೊದಲೇ ಜನರಿಗೆ ಮಾಹಿತಿ ನೀಡಬೇಕು. ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಸಾಧ್ಯವಾಗದಿದ್ದಲ್ಲಿ ಕಚೇರಿಯಲ್ಲಿ ಅಗತ್ಯ ಪ್ರಕ್ರಿಯೆ ಕೈಗೊಂಡು ಪರಿಹರಿಸಬೇಕು ಎಂದರು.
ಸಭೆಯಲ್ಲಿ ಮಳೆ ಕಡಿಮೆ, ಬೆಳೆ, ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಅವರು, ರೈತರಿಗೆ ಅಗತ್ಯವಿರುವ ಬಿತ್ತನೆಬೀಜ, ರಸಗೊಬ್ಬರ ಸೇರಿ ಅಗತ್ಯ ಪರಿಕರಗಳಿಗೆ ಕೊರತೆಯಾಗಬಾರದು. ಮೇವು ದಾಸ್ತಾನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ರಾಸುಗಳ ಆರೋಗ್ಯಕ್ಕೆ ಕಾಲಕಾಲಕ್ಕೆ ಅಗತ್ಯವಿರುವ ಲಸಿಕೆ ಇನ್ನಿತರೆ ಔಷಧೋಪಚಾರಗಳಿಗೆ ನೆರವು ನೀಡಲು ಮುಂದಾಗಬೇಕು. ಕುಡಿಯುವ ನೀರಿಗೂ ತೊಂದರೆಯಾಗಬಾರದು ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡ, ನೀರು ಕಾಲುವೆ ನಿರ್ಮಾಣದ ಕೆಲಸ ಕೈಗೊಳ್ಳುವಂತೆ ಪಿಡಿಒಗಳಿಗೆ ನಿರ್ದೇಶಿಸಿದರು. ಕೆರೆ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸಿ, ಯಾವುದಾದರು ಅಡಚಣೆಗಳಿದ್ದರೆ ಮೇಲಿನ ಅಧಿಕಾರಿಗಳಿಗೆ ತಿಳಿಸುವಂತೆ ಮಂಜುನಾಥ್ ತಿಳಿಸಿದರು.