ಚಿಕ್ಕಬಳ್ಳಾಪುರ: ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದು ರಾತ್ರಿಯಿಡೀ ಜನರ ನಿದ್ದೆ ಕೆಡಿಸಿದ್ದ ಕರಡಿಯೊಂದನ್ನು ಗ್ರಾಮಸ್ಥರೇ ಗ್ರಾಮದಿಂದ ಕಾಡಿಗೆ ಓಡಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುತ್ತಲು ಕಾಡು ಪ್ರದೇಶವಿದ್ದು, ಆಹಾರ ಹುಡುಕಿಕೊಂಡು ಕರಡಿಯೊಂದು ಕಳೆದ ರಾತ್ರಿಯೇ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ರಾತ್ರಿಯಿಡೀ ಕರಡಿ ಗ್ರಾಮವೆಲ್ಲಾ ಸುತ್ತಾಡುತ್ತಿದ್ದ ಕಾರಣ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಗೊಂಡಿದ್ದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅಧಿಕಾರಿಗಳು ಬರುವ ಮೊದಲೇ ಮುಂಜಾನೆ ಗ್ರಾಮಸ್ಥರೆಲ್ಲಾ ಸೇರಿ ಕರಡಿಯನ್ನು ಗ್ರಾಮದಿಂದ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
8 ವರ್ಷಗಳ ಹಿಂದೆ ಇದೇ ರೀತಿ ಕರಡಿಯೊಂದು ಗ್ರಾಮಕ್ಕೆ ಬಂದು ಓರ್ವ ವ್ಯಕ್ತಿಯನ್ನು ಕೊಂದು ಮೂವರಿಗೆ ಗಂಭೀರವಾಗಿ ಗಾಯಗೊಳಿಸಿತ್ತು. ಇದರಿಂದ ಭಯಭೀತಗೊಂಡಿದ್ದ ಗ್ರಾಮಸ್ಥರು ಕರಡಿಯನ್ನು ಕಲ್ಲು ದೊಣ್ಣೆಗಳಿಂದ ಹೊಡೆದು ಸಾಯಿಸಿದ್ದರು. ಸದ್ಯ ಈಗ ಮತ್ತೆ ಕರಡಿ ಪ್ರತ್ಯಕ್ಷವಾದ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದರು.
ಇದನ್ನೂ ಓದಿ: ಚಿರತೆ ಭಯದ ಬೆನ್ನಲ್ಲೇ ಜಿಗಣಿ, ಕಲ್ಲುಬಾಳು ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ.. ಜನರಿಗೆ ಹೆಚ್ಚಿದ ಆತಂಕ