ಬಾಗೇಪಲ್ಲಿ: ಕೆರೆಯಲ್ಲಿ ಈಜಾಡಲು ಹೋದ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸುಜ್ವಾರಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕೆರೆಯಲ್ಲಿ ಆಂಧ್ರ ಪ್ರದೇಶದ ವಡ್ಡಿವಾಂಡ್ಲಪಲ್ಲಿ ಮೂಲದ ಬದ್ರಿನಾಥ್ (13) ಹಾಗೂ ಸಾಲಮಾಕಲಪಲ್ಲಿ ವರೂಣ್ (12), ಸಾಲಮಾಕಲಪಲ್ಲಿ ಸಂತೋಷ್ (13), ಉದುವಾರಪಲ್ಲಿ ಮಹೇಶ್ (12) ಎಂಬ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.
ನಾಲ್ವರು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಾಡಲು ತೆರಳಿದ್ದು, ಬಹುಶಃ ಈಜು ಬಾರದೆ ಅಥವಾ ಕೆರೆ ಆಳವಾಗಿರುವ ಹಿನ್ನೆಲೆ ಮುಳುಗಿರಬಹುದು ಎಂದು ಶಂಕಿಸಲಾಗಿದೆ. ವಿದ್ಯಾರ್ಥಿಗಳು ಮುಳುಗಿರುವ ವಿಚಾರ ತಿಳಿದ ತಕ್ಷಣ ಗ್ರಾಮಸ್ಥರು ಅವರನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
ಪ್ರಸ್ತುತ ನಾಲ್ವರು ವಿದ್ಯಾರ್ಥಿಗಳ ಮೃತದೇಹಗಳನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯ ಸಜ್ಜುವಾರಪಲ್ಲಿ ಗ್ರಾಮದ ಬಳಿ ಇರುವ ಕುಂಟೆಯಲ್ಲಿ ನಾಲ್ಕು ಮಕ್ಕಳು ಮುಳುಗಿ ದುರ್ಮರಣ ಹೊಂದಿರುವ ಹೃದಯ ವಿದ್ರಾವಕ ಘಟನೆ ಆಘಾತ ಮೂಡಿಸಿದೆ. ಮೃತ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ತಂದೆ-ತಾಯಂದಿರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಡಾ. ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
![ಆರೋಗ್ಯ ಮತ್ತು ವೈದ್ಯಕೀಯ ಸಚಿವರಾದ ಡಾ.ಕೆ. ಸುಧಾಕರ್ ಟ್ವೀಟ್](https://etvbharatimages.akamaized.net/etvbharat/prod-images/kn-ckb-03-minister-twit-kids-death-kac10004_04112020215226_0411f_1604506946_882.png)