ಚಿಕ್ಕಬಳ್ಳಾಪುರ: ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಮನೆಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಶೂಟ್ ಮಾಡಿ ಚಿನ್ನಾಭರಣ, ನಗದು ದೋಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಕಲ್ಯಾಣ ಮಂಟಪದ ಬಳಿ ಇರುವ ಎಎಸ್‌ಐ ನಾರಾಯಣಸ್ವಾಮಿ ಮನೆಯಲ್ಲಿ ಘಟನೆ ನಡೆದಿದೆ.
ನಾರಾಯಣಸ್ವಾಮಿ ಮಗ ಶರತ್ ಮೇಲೆ ಗುಂಡು ಹಾರಿಸಲಾಗಿದೆ. ಅವರಿಗೆ ಮೂರು ಗುಂಡು ತಗುಲಿದ್ದು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರಾಯಣ ಸ್ವಾಮಿ ಅವರ ಪತ್ನಿ ಹಾಗು ಸೊಸೆಯ ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ನಗದನ್ನು ದೋಚಿದ್ದಾರೆ.
![ASI son Sharath](https://etvbharatimages.akamaized.net/etvbharat/prod-images/16884716_tiru.jpg)
ಬ್ರೀಜಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ದರೋಡೆ ಸಮಯದಲ್ಲೇ ಬಾಗೇಪಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣಸ್ವಾಮಿ ಮನೆಗೆ ಬಂದಿದ್ದರು. ಅವರನ್ನು ಮಾರಕಾಸ್ತ್ರಗಳಿಂದ ಬೆದರಿಸಿದ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ವಾಮಮಾರ್ಗದಲ್ಲಿ ವಿದೇಶಿಯರು ಸೇರಿ ಆರೋಪಿಗಳಿಗೂ ಪಾಸ್ ಪೋರ್ಟ್: ಅಕ್ರಮ ಜಾಲ ಪತ್ತೆ ಹಚ್ಚಿದ ಖಾಕಿ