ಚಿಕ್ಕಬಳ್ಳಾಪುರ : ಹಳೇ ವೈಷಮ್ಯದ ಹಿನ್ನೆಲೆ ರೌಡಿ ಶೀಟರ್ ಓರ್ವನನ್ನು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಗೌರಿಬಿದನೂರು ಗ್ರಾಮಾಂತರ ಠಾಣೆ ರೌಡಿ ಶೀಟರ್ ಆಟೋ ರಮೇಶ ಎಂಬಾತನನ್ನು, ಕಳೆದ ರಾತ್ರಿ ಆತನಿಗೆ ಪರಿಚಯಸ್ಥರೇ ಆಗಿರುವ ರೌಡಿಗಳ ಗುಂಪೊಂದು ತಾಲೂಕಿನ ಕಾದಲವೇಣಿ ಗ್ರಾಮದ ಬಳಿ ಅಟ್ಟಾಡಿಸಿ ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿತ್ತು. ಬಳಿಕ ತಮಗೇನು ಗೊತ್ತಿಲ್ಲದ ರೀತಿ ಹಳೆ ಉಪ್ಪಾರಹಳ್ಳಿ ಗ್ರಾಮದ ನಿರ್ಜನ ಪ್ರದೇಶ ದಿನ್ನೆ ಬಳಿ ಪಾರ್ಟಿಯಲ್ಲಿ ತೊಡಗಿದ್ದರು. ಆದ್ರೆ, ಪೊಲೀಸರು ಆರೋಪಿಗಳ ಅಡಗುತಾಣವನ್ನು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ. ವೆಂಕಟರೆಡ್ಡಿ ಅಲಿಯಾಸ್ ಜಂಗ್ಲಿ, ಅರ್ಜುನ್, ವೆಂಕಟೇಶ, ಅಂಬರೀಶ್, ನರೇಂದ್ರ ರೆಡ್ಡಿ ಬಂಧಿತರು.
ಪೊಲೀಸರು ಬಂಧಿಸುವ ವೇಳೆ ರೌಡಿ ಶೀಟರ್ ಅಂಬರೀಶ್ ಎಂಬಾತ ಕಾನ್ಸ್ಟೆಬಲ್ ಮದು ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪಿಎಸ್ಐ ಮೋಹನ್ ಫೈರಿಂಗ್ ಮಾಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಸ್ಪಿ ಮಿಥುನ್ ಕುಮಾರ್, ಪೊಲೀಸ್ ಉಪ ಅಧೀಕ್ಷಕ ರವಿಶಂಕರ್ ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಗೌರಿಬಿದನೂರು ತಾಲೂಕು ಆಸ್ಪತ್ರೆಗೆ ಹಾಗೂ ಫೈರಿಂಗ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೌಡಿ ಶೀಟರ್ ಆಟೋ ರಮೇಶ ಕಳೆದ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ಕಾರ್ಯಕರ್ತ ರಾಮಿರೆಡ್ಡಿಯನ್ನು ಹತ್ಯೆಗೈದಿದ್ದ ಎನ್ನಲಾಗ್ತಿದೆ. ಈ ದ್ವೇಷದ ಹಿನ್ನೆಲೆ ಸೇಡು ತೀರಿಸಿಕೊಳ್ಳಲು ಮೃತನ ಸ್ನೇಹಿತ ಅಂಬರೀಶ್ ಸೂಚನೆ ಮೇರೆಗೆ ರೌಡಿಗಳು ಅಟೋ ರಮೇಶನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.