ಚಿಕ್ಕಬಳ್ಳಾಪುರ: ಬಹುಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಕನ್ನಡದ 'ಕಬ್ಜ' ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮ ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಆರ್ ಚಂದ್ರು ನಿರ್ದೇಶನದಿಂದ ಮೂಡಿಬರುತ್ತಿರುವ 'ಕಬ್ಜ' ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕೂತುಹಲ ಕೆರಳಿಸಿದ್ದು, ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ.
ಚಿತ್ರದಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಸೇರಿದಂತೆ ದಕ್ಷಿಣ ಭಾರತದ ಹಲವು ಫೇಮಸ್ ಕಲಾವಿದರು ನಟಿಸಿದ್ದಾರೆ. ಧ್ವನಿ ಸುರುಳಿ ಕಾರ್ಯಕ್ರಮಕ್ಕೆ ನಟ ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆರೋಗ್ಯ ಸಚಿವ ಸುಧಾಕರ್ ಹಾಗೂ ಸಮಾಜ ಸೇವಕ ಸೀಕಲ್ ರಾಮಚಂದ್ರ ರೆಡ್ಡಿ ಚಾಲನೆ ನೀಡಿದರು.
ಚಿತ್ರದ ಒಂದು ಹಾಡು ಈಗಾಗಲೇ ಹೈದರಾಬಾದ್ನಲ್ಲಿ ಬಿಡುಗಡೆಗೊಂಡಿದೆ. ಇದೀಗ ಶಿಡ್ಲಘಟ್ಟ ನಗರದಲ್ಲಿ ಮತ್ತೊಂದು 'ಚುಮುಚುಮು ಚಳಿ' ಹಾಡನ್ನು ನಟ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್, ಗೀತಾ ಶಿವ ರಾಜ್ಕುಮಾರ್, ಆರೋಗ್ಯ ಸಚಿವ ಸುಧಾಕರ್, ಸೀಕಲ್ ರಾಮಚಂದ್ರರೆಡ್ಡಿ ಲಾಂಚ್ ಮಾಡಿದರು.
ಚಿತ್ರಕ್ಕೆ ಶುಭಕೋರಿದ ಸಚಿವ ಸುಧಾಕರ್: "ನಾನು ಮೊದಲು ಚಿಕ್ಕಬಳ್ಳಾಪುರದಲ್ಲಿ ಧ್ವನಿ ಸುರಳಿ ಕಾರ್ಯಕ್ರಮ ಬಿಡುಗಡೆ ಮಾಡಲು ಹೇಳಿದ್ದೆ. ಆದರೆ ನಿರ್ದೇಶಕ ಆರ್ ಚಂದ್ರು ಅವರಿಗೆ ಶಿಡ್ಲಘಟ್ಟದ ಮೇಲೆ ಒಲವು ಜಾಸ್ತಿಯಿತ್ತು. ಹಾಗಾಗಿ ಇಲ್ಲಿಯೇ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಉಪೇಂದ್ರ ಅವರು ಭಾರತದ ರಿಯಲ್ ಸ್ಟಾರ್ ಆಗಿದ್ದಾರೆ. ಈ ಸಿನಿಮಾದಿಂದಾಗಿ ಅವರ ಲೆವೆಲ್ ಮತ್ತಷ್ಟು ಬದಲಾಗಲಿದೆ. ಇನ್ನಷ್ಟು ಹೆಸರು ಮಾಡಲಿದ್ದಾರೆ. 'ಕಬ್ಜ' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಯಶಸ್ವಿಯಾಗಲಿ" ಎಂದು ಆರೋಗ್ಯ ಸಚಿವ ಸುಧಾಕರ್ ಚಿತ್ರ ತಂಡಕ್ಕೆ ಶುಭಕೋರಿದರು.
ಇದನ್ನೂ ಓದಿ: ಖಾಕಿ ತೊಟ್ಟ ಡಾಲಿ.. ಹೊಯ್ಸಳ ಚಿತ್ರದ ಮೊದಲ ಹಾಡು ಬಿಡುಗಡೆ
"ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಆಗ್ತಿರೋದು ನಿಜಕ್ಕೂ ಸಂತಸದ ವಿಷಯ. ಕಬ್ಜ ಸಿನಿಮಾ ಅಭಿಮಾನಿಗಳ ಮನಸ್ಸನ್ನು ಗೆಲ್ಲಲಿದೆ. ಜೊತೆಗೆ ಸಾಕಷ್ಟು ಯಶಸ್ವಿ ಕಾಣಲಿದೆ. ನಾನು ಇವತ್ತು ಕಾರ್ಯಕ್ರಮಕ್ಕೆ ನನ್ನ ಗೆಳೆಯ ನಿರ್ದೇಶಕ ಆರ್ ಚಂದ್ರು ಮತ್ತು ಉಪೇಂದ್ರ ಅವರ ಅಭಿಮಾನದಿಂದ ಬಂದಿದ್ದೇನೆ. ಸಿನಿಮಾವು 'ಆರ್ಆರ್ಆರ್' ರೀತಿಯಲ್ಲಿ ಹಿಟ್ ಆಗಲಿ" ಎಂದರು.
ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ, "ನಾನು ಶಿವ ರಾಜ್ಕುಮಾರ್ ಜೊತೆ ಆ್ಯಕ್ಷನ್ ಮೂವಿ ಮಾಡಲಿದ್ದೇನೆ. ನಿಜವಾಗಿಯೂ ಪುನೀತ್ ರಾಜ್ಕುಮಾರ್ ಅವರ ಸಿನಿಮಾಗೆ ನಿರ್ದೇಶನ ಮಾಡಬೇಕಿತ್ತು. ಆದರೆ, ಈಗ ಶಿವಣ್ಣ ಅವರೇ ಎಲ್ಲವೂ ಆಗಿದ್ದಾರೆ. ಗೀತಾ ಶಿವ ರಾಜ್ಕುಮಾರ್ ಅವರ ಪ್ರೊಡಕ್ಷನ್ನಲ್ಲಿ ಚಿತ್ರವನ್ನು ನಿರ್ದೇಶನ ಮಾಡಲಿದ್ದೇನೆ" ಎಂದು ತಿಳಿಸಿದರು.
'ಕಬ್ಜ' ಪ್ಯಾನ್ ಇಂಡಿಯಾ ಸಿನಿಮಾ: ಕಬ್ಜ 1960-80 ರಲ್ಲಿ ನಡೆಯುವ ಕಥೆ. ಉಪೇಂದ್ರ ಅವರು ಗ್ಯಾಂಗ್ಸ್ಟಾರ್ ಪಾತ್ರ ನಿರ್ವಹಿಸಿದ್ದು, ಸುದೀಪ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಉಪ್ಪಿ ಜೋಡಿಯಾಗಿ ಬ್ಯೂಟಿ ಕ್ವೀನ್ ಶ್ರೀಯಾ ಶರಣ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತೆಲುಗು ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ, ಐ ಸಿನಿಮಾ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗಪತ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್ ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು ಹೀಗೆ ದೊಡ್ಡ ಕಲಾವಿದರ ದಂಡು ಇದೆ.
ಎಂಟಿಬಿ ನಾಗರಾಜ್ ಅರ್ಪಿಸುವ ಈ ಸಿನಿಮಾವನ್ನು ಆರ್ ಚಂದ್ರು ಅವರೇ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್ ಖ್ಯಾತಿಯ ಬಸ್ರೂರು ಸಂಗೀತ ನಿರ್ದೇಶನವಿದೆ. ಎ.ಜೆ ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶಕ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿದೆ. ಇನ್ನು ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದಂದು ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಸಿನಿಮಾ ರೂಪ ಪಡೆಯಲಿದೆ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಗಲಾಟೆ