ಚಿಕ್ಕಬಳ್ಳಾಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ ಆರ್ ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಇಂದು ಗುಡಿಬಂಡೆ ತಾಲೂಕು ಕಚೇರಿಯಲ್ಲಿ ಗೌರವ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಗುಡಿಬಂಡೆ ತಹಶಿಲ್ದಾರ್ ಹನುಮಂತರಾಯಪ್ಪ ಮಾತನಾಡಿ, ಡಾ. ಅಂಬೇಡ್ಕರ್ ಅವರು ಅನುಭವಿಸಿದ ಯಾತನೆಗಳಿಗೆ ಲೆಕ್ಕವಿಲ್ಲ. ಅವರು ಬಹಳ ಕಷ್ಟದಿಂದ ಸಮಾನತೆಯ ತೇರನ್ನು ಇಷ್ಟು ದೂರ ಎಳೆದು ತಂದಿದ್ದಾರೆ. ಏನೇ ಅಡ್ಡಿ, ಆತಂಕ ಎದುರಾದರೂ ಅವರು ಮುನ್ನಡೆಸಿದ ತೇರನ್ನು ಮುಂದೆ ಎಳೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ದಲಿತ ಜನಾಂಗದ ಅಭಿವೃದ್ಧಿಗಾಗಿ ಬಾಬಾ ಸಾಹೇಬರು ನಡೆಸಿದ ಅವಿಶ್ರಾಂತ ಹೋರಾಟ ಅವಿಸ್ಮರಣೀಯ. ಬದುಕಿನುದ್ದಕ್ಕೂ ದಲಿತ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಡಾ. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಆಶಾಜ್ಯೋತಿ. ಶತಮಾನಗಳಿಂದಲೂ ತುಳಿತಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಮಹಾನ್ ಮಾನವತಾವಾದಿ ಎಂದರು.