ಚಿಕ್ಕಬಳ್ಳಾಪುರ: ಯೂ ಟರ್ನ್ ತೆಗೆದುಕೊಳ್ಳುವ ವೇಳೆ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬಾಗೇಪಲ್ಲಿ ತಾಲೂಕಿನ ಮೂಗಚಿನ್ನೇಪಲ್ಲಿ ಗ್ರಾಮದ ಕೃಷ್ಣಪ್ಪ ಮೃತ ದುರ್ದೈವಿ. ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರಕ್ಕೆ ಬೈಕ್‍ನಲ್ಲಿ ಬರುತ್ತಿದ್ದ ರಾಮಾಂಜಿನಪ್ಪ ಹಾಗೂ ಕೃಷ್ಣಪ್ಪ ಬೈಪಾಸ್ ರಸ್ತೆಯ ಅಗಲಗುರ್ಕಿ ಗೇಟ್ ಬಳಿ ಯೂ ಟರ್ನ್ ತೆಗೆದುಕೊಳ್ಳುವಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಸವಾರ ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ದ್ವಿಚಕ್ರ ವಾಹನ ಚಾಲಕ ಹಾಗೂ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.