ಚಿಂತಾಮಣಿ (ಚಿಕ್ಕಬಳ್ಳಾಪುರ) : ವಾರ್ಡ್ ನಂ. 27ರ ಶಾಂತಿನಗರದಲ್ಲಿ ಸುಮಾರು 40 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಎರಡು ಅಂತಸ್ತಿನ ಮಹಡಿ ಏರಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದು ಸಂಜೆ ನಡೆದಿದೆ.
ನಗರದ ಹಲವು ಬೀದಿಗಳನ್ನು ಸುತ್ತಾಡಿದ ಅಪರಿಚಿತ ಮಹಿಳೆಯು ಕೊನೆಗೆ ಎರಡು ಅಂತಸ್ತಿನ ಮಹಡಿ ಏರಿ ಅಲ್ಲಿಯೇ ನಿಂತು ಆತಂಕ ಸೃಷ್ಟಿ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ಸ್ಥಳೀಯರು ಮಹಡಿ ಏರಿ ಆಕೆಯನ್ನು ಕೆಳಗಿಳಿಯುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಮಹಿಳೆ ಮೌನವಾಗಿಯೇ ಇದ್ದಳು.
ನಂತರ ಉಪಾಯದಿಂದ ಆಕೆಯನ್ನು ಕೆಳಗಿಳಿಸುವಲ್ಲಿ ಸ್ಥಳೀಯರು ಯಶಸ್ವಿಯಾದರು. ಕೆಳಗಿಳಿಸಿದ ಬಳಿಕ ತನಗೇನೂ ಗೊತ್ತಿಲ್ಲವೆಂಬಂತೆ ಮಹಡಿಯ ಮೇಲಿಂದ ಇಳಿದ ಮಹಿಳೆ ತನ್ನ ಪಾಡಿಗೆ ಹೋರಟು ಹೋಗುವ ಮೂಲಕ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದಳು.