ಚಿಂತಾಮಣಿ(ಚಿಕ್ಕಬಳ್ಳಾಪುರ): ವ್ಯಕ್ತಿಯೊಬ್ಬ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿ, ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ನಡೆದಿದೆ.
ಇಪ್ಪತ್ತು ವರ್ಷಗಳ ಹಿಂದೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಲಕಲನೇರ್ಪು ಗ್ರಾಮದ ವೆಂಕಟರವಣಪ್ಪನ ಜೊತೆ ಲಕ್ಷ್ಮಿದೇವಮ್ಮನ ವಿವಾಹವಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ವೆಂಕಟರವಣಪ್ಪ ವರದಕ್ಷಿಣೆ ತರುವಂತೆ ಪ್ರತಿನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇಂದು ಇದೇ ವಿಚಾರಕ್ಕೆ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾನೆ. ಆದರೆ, ಲಕ್ಷ್ಮಿದೇವಮ್ಮ ಗಂಡನಿಂದ ತಪ್ಪಿಸಿಕೊಂಡು ಬಂದು ನನಗೆ ಪೊಲೀಸರ ರಕ್ಷಣೆ ಬೇಕೆಂದು ಮನವಿ ಮಾಡಿಕೊಂಡಿದ್ದಾಳೆ .
ಪ್ರತಿನಿತ್ಯವೂ ವರದಕ್ಷಿಣೆ ತರುವಂತೆ ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ. ಆತನಿಂದ ನನಗೆ ಪ್ರಾಣಾಪಾಯವಿದೆ. ನನ್ನ ಬಗ್ಗೆ ಇಲ್ಲ-ಸಲ್ಲದ ವಿಷಯ ಹೇಳಿ ನನ್ನಿಂದ ಮಕ್ಕಳನ್ನು ದೂರ ಮಾಡಿದ್ದಾನೆ. ಈಗ ಎರಡನೇ ಮದುವೆ ಮಾಡಿಕೊಂಡು ನನ್ನ ಕೊಲೆಗೆ ಯತ್ನಿಸುತ್ತಿದ್ದಾರೆ ಎಂದು ಲಕ್ಷ್ಮಿದೇವಮ್ಮ ಆರೋಪಿಸಿದ್ದಾಳೆ.