ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ಟೊಮ್ಯಾಟೊ ಬೆಳೆ ಸಂಪೂರ್ಣ ನಷ್ಟ ಹೊಂದಿರುವುದರಿಂದ ಹಾಗೂ ಕೈ ಸಾಲ ತೀರಿಸಲಾಗದೆ ತಾಲೂಕಿನ ಡಿ.ಕೊತ್ತಪಲ್ಲಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದಕ್ಕೆ ಮನನೊಂದು ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದೆ. ಬಳಿಕ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಗೊರ್ತದ ರೈತ ರವಣಪ್ಪ (50) ಮೃತಪಟ್ಟಿರುವ ರೈತ. ಒಂದು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು 2 ಲಕ್ಷ ರೂಪಾಯಿ ಕೈ ಸಾಲ ಮಾಡಿದ್ದರಂತೆ. ಟೊಮ್ಯಾಟೊ ಬೆಳೆ ಸಂಪೂರ್ಣ ನಷ್ಟ ಹೊಂದಿರುವುದರಿಂದ ರೈತ ರವಣಪ್ಪ ತಮ್ಮ ಜಮೀನಿನಲ್ಲಿ ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದೆ.
ಕೂಡಲೇ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮೃತರಿಗೆ 3 ಮಕ್ಕಳು ಇದ್ದಾರೆ.