ಚಿಕ್ಕಬಳ್ಳಾಪುರ: ನಾಯಿ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನಿಗೆ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆ ಸಾವನ್ನಪ್ಪಿರುವುದಾಗಿ ಪೋಷಕರು ಆರೋಪಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನ ಹೊಸೂರು ಬಳಿಯ ಕೊರಟಲದಿನ್ನೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪೈರೋಜ್ ಹಾಗೂ ಫಾಮೀದಾ ದಂಪತಿ ಮಗ ಸಮೀರ್ ಭಾಷಾ ಮೃತ ಬಾಲಕ ಎಂದು ತಿಳಿದು ಬಂದಿದೆ. ಕಳೆದ ತಿಂಗಳ ಅಕ್ಟೋಬರ್ 30 ರಂದು ಮನೆಯ ಪಕ್ಕದಲ್ಲಿ ನಾಯಿ ಕಚ್ಚಿದ ಹಿನ್ನೆಲೆ ಹೊಸೂರು ಬಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಮೀರ್ಗೆ ನಾಯಿ ಕಡಿತಕ್ಕೆ ಇಂಜಕ್ಷನ್ ಕೊಡಿಸಲಾಗಿತ್ತು. ಬಳಿಕ ಬಾಲಕನ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಕೂಡಲೇ ಪೋಷಕರು ಬಾಲಕನನ್ನು ಗೌರಿಬಿದನೂರಿನ ಖಾಸಗಿ ಆಸ್ಪತ್ರೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಗುವಿಗೆ ಯಾವ ಇಂಜಕ್ಷನ್ ನೀಡಿದ್ದೀರಿ ಎಂದು ವೈದ್ಯರು ಜಿಲ್ಲಾ ಆಸ್ಪತ್ರೆಗೆ ಮಾಹಿತಿ ಕೇಳಿದಾಗ ಅಲ್ಲಿಯ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ಬಳಿಕ ಬಾಲಕನ ರಕ್ತ ಪರೀಕ್ಷೆಯ ಮಾಡಿ ಮತ್ತೆ ಇಂಜಕ್ಷನ್ ನೀಡಲಾಗಿದ್ದು, ಬಾಲಕನ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ. ನಂತರ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಬಾಲಕ ಮೃತ ಪಟ್ಟಿದ್ದು, ಮೆದುಳಿಗೆ ವಿಷ ತಗುಲಿ ಸಾವನ್ನಪ್ಪಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನುವುದು ಪೋಷಕರ ಆರೋಪವಾಗಿದೆ.
ಇದರಿಂದ ಆಕ್ರೋಶಗೊಂಡ ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಸ್ಥಳಕ್ಕೆ ದವಡಾಯಿಸಿದ ಟಿಹೆಚ್ಒ ಸಾವಿಗೆ ಕಾರಣ ನಾಯಿ ಕಡಿತ ಅಲ್ಲ ಎಂದು ಮಾಹಿತಿ ನೀಡಿದ್ದು, ಬಾಲಕನ ಸಾವಿಗೆ ಕಾರಣ ಏನೆಂದು ತನಿಖೆಯ ನಂತರ ಹೊರ ಬರಬೇಕಾಗಿದೆ ಎಂದರು. ಇನ್ನು ಈ ವಿಚಾರವಾಗಿ ಸಮೀರ್ ಪೋಷಕರು ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಮೊರ್ಬಿ ಬಳಿಕ ಮತ್ತೊಂದು ದುರಂತ.. ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರ ದುರ್ಮರಣ