ಬಾಗೇಪಲ್ಲಿ: ಕೆಲ ದಿನಗಳ ಹಿಂದೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ತಾಲ್ಲೂಕಿನ ಕೊತ್ತಕೋಟೆಯ ಮಾಡಪ್ಪಲ್ಲಿ ಗ್ರಾಮದ ಪ್ರಗತಿಪರ ರೈತ ಗೆಂಗಿರೆಡ್ಡಿ, ಗೋವರ್ಧನ ರೆಡ್ಡಿಯವರ ಜಮೀನಿಗೆ ಕ್ಷೇತ್ರ ಅಧ್ಯಯನಕ್ಕಾಗಿ ಬಂದಿತ್ತು. ಈ ವೇಳೆ, ಇಲ್ಲಿನ ರೈತರು 5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅರ್ಕಾ ಸಿರಿ ಕರ್ಬೂಜ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಬಾರಿ ಒಳ್ಳೆಯ ಬೆಳೆ ಬಂದ ಕಾರಣ ರೈತರು ಲಾಭದ ಕನಸು ಕಾಣುತ್ತಿದ್ದರು. ಆದ್ರೆ, ಕರ್ಬೂಜ ಕಾಯಿ ಹಣ್ಣಾಗ ತೊಡಗುತ್ತಿದ್ದಂತೆ ಕೊರೊನಾ ವೈರಸ್ನ ಆತಂಕ ಶುರುವಾಯಿತು. ಇದರಿಂದಾಗಿ ಬೆಳೆಯ ನಿರ್ವಹಣೆಗೆ ಕೂಲಿಯಾಳುಗಳು ಸಿಗಲಿಲ್ಲ. ಮಾರುಕಟ್ಟೆಗೆ ತಲುಪಿಸಲು ಸಾರಿಗೆ ಸಮಸ್ಯೆ ತಲೆದೋರಿತು. ಪರಿಣಾಮ ರೈತನಲ್ಲಿದ್ದ ಬೆಟ್ಟದಷ್ಟು ನಿರೀಕ್ಷೆ ಕಣ್ಣೀರಿನಲ್ಲಿ ಕರಗಿತು.
ಸದ್ಯ ಕರ್ಬೂಜ ಹಣ್ಣುಗಳು ಜಮೀನಿನಲ್ಲೇ ಮಾಗಿ ಕೊಳೆಯುತ್ತಿವೆ. ಬೆಳೆ ಬೆಳೆದ ಸುತ್ತಲಿನ ಗ್ರಾಮಸ್ಥರು ಉಚಿತವಾಗಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಸಾಲ ಮಾಡಿ ಲಕ್ಷಾಂತರ ರೂಪಾಯಿಗಳ ಬಂಡವಾಳ ಹಾಕಿ ಬೆಳೆದ ಬೆಳೆಗಾರ ಈಗ ನಷ್ಟದಲ್ಲಿ ತಲೆಗೆ ಕೈಯಿಟ್ಟು ಕುಳಿತಿದ್ದಾನೆ.