ಚಾಮರಾಜನಗರ: ನಟ ರಾಘವೇಂದ್ರ ರಾಜ್ಕುಮಾರ್ ಎರಡನೇ ಪುತ್ರ ಯುವರಾಜ್ಕುಮಾರ್ ಮದುವೆ ಇದೇ ತಿಂಗಳ 26 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ದೊಡ್ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.
ಇಂದು ದೊಡ್ಡಗಾಜನೂರಿನ ಮನೆಯಲ್ಲಿ ಯುವರಾಜ್ಕುಮಾರ್ಗೆ ಅರಿಶಿಣ ಶಾಸ್ತ್ರ ನೆರವೇರಿತು. ಸಡಗರ ಸಂಭ್ರಮದೊಂದಿಗೆ ರಾಘವೇಂದ್ರ ರಾಜ್ಕುಮಾರ್, ಪತ್ನಿ ಮಂಗಳ, ವಿನಯ್ ರಾಜ್ಕುಮಾರ್, ಅಜ್ಜಿ ನಾಗಮ್ಮ ಮತ್ತು ಸಂಬಂಧಿಗಳು ಯುವರಾಜ್ಕುಮಾರ್ಗೆ ಅರಿಶಿಣ ಬಳಿದು ಶಾಸ್ತ್ರೋಕ್ತ ಕಾರ್ಯಗಳನ್ನು ನೆರವೇರಿಸಿದರು.
ದೊಡ್ಡಗಾಜನೂರಿನ ಮನೆಯನ್ನು ಡಾ. ರಾಜ್ಕುಮಾರ್ ಬಹಳ ಆಸೆಯಿಂದ ಕಟ್ಟಿಸಿದ್ದರು. ಈ ಹಿಂದೆ ಶಿವಣ್ಣನ ಪುತ್ರಿಗೂ ಇದೇ ಮನೆಯಲ್ಲಿ ಅರಿಶಿಣ ಶಾಸ್ತ್ರ ನೆರವೇರಿಸಲಾಗಿತ್ತು. ದೊಡ್ಮನೆಯ ಬಹುತೇಕ ಶುಭ-ಸಮಾರಂಭಗಳಿಗೆ ಅಣ್ಣಾವ್ರ ಮೆಚ್ಚಿನ ಮನೆ ಸಾಕ್ಷಿಯಾಗಿದೆ.