ಚಾಮರಾಜನಗರ : ಹನೂರು ತಾಲೂಕಿನ ಗೋಪಿನಾಥಂನಲ್ಲಿ ಜನ ಕೊರೊನಾ ಪೂಜೆ ಮಾಡಿ ಗ್ರಾಮಕ್ಕೆಲ್ಲ ಮಂತ್ರಜಲ ಪ್ರೋಕ್ಷಣೆ ಮಾಡಿರುವ ಘಟನೆ ನಡೆದಿದೆ.
ಕೆಲವು ತಿಂಗಳ ಹಿಂದೆಯೂ ಗ್ರಾಮದಲ್ಲಿ ಪೂಜೆ ನಡೆಸಲಾಗಿತ್ತು. ಗ್ರಾಮದ ಮಾರಿಯಮ್ಮ ದೇಗುಲದಲ್ಲಿ ಅಭಿಷೇಕ ನಡೆಸಿ, ಕೊರೊನಾ ಗ್ರಾಮಕ್ಕೆ ಬರದಂತೆ ವಿಶೇಷ ಪೂಜೆ ನಡೆಸಿದ್ದಾರೆ.
ಅರ್ಚಕ ಸುಬ್ರಮಣಿ ಎಂಬಾತನಿಗೆ ದೇವರು ಆವಾಹನೆಯಾಗಿದ್ದು, ಮಂತ್ರ ಜಲವನ್ನು ಗ್ರಾಮಕ್ಕೆಲ್ಲಾ ಪ್ರೋಕ್ಷಿಸಿದ್ರೇ ಕೊರೊನಾ ಬರುವುದಿಲ್ಲ ಎಂಬ ಅಭಯವನ್ನೂ ಅರ್ಚಕನ ಮೂಲಕ ದೇವರು ಹೇಳಿದೆ ಎಂದು ಗ್ರಾಮಸ್ಥರು ನಂಬಿರುವುದಾಗಿ ಸ್ಥಳೀಯ ಯುವಕನೋರ್ವ ಈಟಿವಿ ಭಾರತಕ್ಕೆ ವಿಡಿಯೋ ಸೆರೆ ಹಿಡಿದು ಮಾಹಿತಿ ನೀಡಿದ್ದಾನೆ.
ಅರ್ಚಕ ಸುಬ್ರಮಣಿ ಗ್ರಾಮಕ್ಕೆಲ್ಲಾ ಮಂತ್ರಜಲ ಪ್ರೋಕ್ಷಿಸಿ, ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಬಳಿಕ ಕೊರೊನಾ ಮಹಾಮಾರಿ ತಗುಲದಿರಲೆಂದು ಗ್ರಾಮದ ಬಹುತೇಕರು ತೀರ್ಥ, ಪ್ರಸಾದ ಪಡೆದಿದ್ದಾರೆ.
ಚಾಮರಾಜನಗರದಲ್ಲಿ ಮಾರಿ ಪೂಜೆ, ಕೊಳ್ಳೇಗಾಲದಲ್ಲಿ ಕೊರೊನಾ ಕಾಯಿ ಬಲಿ ಬಳಿಕ ಗೋಪಿನಾಥಂನಲ್ಲಿ ಮಂತ್ರಜಲ ಪ್ರೋಕ್ಷಣೆ ನಡೆದಿದೆ. ವೈಜ್ಞಾನಿಕವಾಗಿ ಇವು ರುಜುವಾತಾಗದಿದ್ದರೂ ಜನರ ಮನಸ್ಸಿನಲ್ಲಿ ಈ ಸಂಪ್ರದಾಯಗಳು ಗಾಢವಾಗಿ ಅಚ್ಚೊತ್ತಿರುವುದು ವಿಶೇಷ.