ಚಾಮರಾಜನಗರ: ಬಸ್ಸಿನಿಂದ ಆಯತಪ್ಪಿ ಬಿದ್ದು ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ವಡಕೆಹಳ್ಳ ಬಳಿ ನಡೆದಿದೆ. ಮೃತ ಮಹಿಳೆಯನ್ನು ಹಳೆಯೂರು ಗ್ರಾಮದ ಕುಳ್ಳಮಾದಿ (50) ಎಂದು ಗುರುತಿಸಲಾಗಿದೆ.
ಮೃತ ಕುಳ್ಳಮಾದಿಯು ಮಹದೇಶ್ವರ ಬೆಟ್ಟದಿಂದ ಮೈಸೂರು ಹಾಗೂ ಕೆ.ಆರ್.ಪೇಟೆಯ ಮಾರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಡೆಕೆಹಳ್ಳ ಸಮೀಪ ವಾಂತಿ ಬರುತ್ತಿರುವುದಾಗಿ ಕಂಡಕ್ಟರ್ಗೆ ತಿಳಿಸಿದ್ದಾಳೆ. ಹೀಗಾಗಿ ಹಿಂಬದಿಯ ಡೋರ್ ಬಳಿ ವಾಂತಿ ಮಾಡುವಂತೆ ತಿಳಿಸಿದ್ದಾರೆ. ಆದರೆ ಈ ವೇಳೆ ತಿರುವಿನಲ್ಲಿ ಆಯತಪ್ಪಿ ಬಸ್ನಿಂದ ಬಿದ್ದು ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾರೆ.
ಬಳಿಕ ಬಸ್ ಚಾಲಕ, ಕಂಡಕ್ಟರ್ ಹಾಗೂ ಸಹ ಪ್ರಯಾಣಿಕರು ಸೇರಿ ಅದೇ ಬಸ್ನಲ್ಲಿ ಮೃತದೇಹವನ್ನು ಮಹದೇಶ್ವರಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಆದರೆ ಅಷ್ಟರಾಗಲೇ ಆಕೆ ಸಾವನಪ್ಪಿದ್ದಳು.
8 ಕಿ.ಮೀ ಶವ ಹೊತ್ತೊಯ್ದ ಸಂಬಂಧಿಕರು..
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ವಾಹನವಿದ್ದರೂ ಚಾಲಕನಿಲ್ಲದಿರುವುದರಿಂದ, ಬೇರೆ ವಾಹನಗಳು ಸಿಗದೆ ಕುಟುಂಬಸ್ಥರು ಪರದಾಡಿದ್ದಾರೆ. ಬಳಿಕ ಸಂಬಂಧಿಕರೇ ಸೇರಿ ಹೆಗಲ ಮೇಲೆ ಮೃತದೇಹವನ್ನು 8 ಕಿ.ಮೀ ಹೊತ್ತೊಯ್ದಿದ್ದಾರೆ. ಇನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕ ಹಾಗೂ ಕಂಡಕ್ಟರ್ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ: 15 ವರ್ಷ ವಯಸ್ಸು ಮೇಲ್ಪಟ್ಟ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಅಲಹಾಬಾದ್ ಹೈಕೋರ್ಟ್