ಚಾಮರಾಜನಗರ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಇಂದು (ಮಂಗಳವಾರ) ಚಾಮರಾಜನಗರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕಹಳೆ ಮೊಳಗಿಸಿದರು. ಚಾಮರಾಜೇಶ್ವರ ದೇಗುಲದ ಮುಂಭಾಗದಿಂದ ಸಚಿವ ಕೆ.ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಹಲವರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿಬಂದು ಭುವನೇಶ್ವರಿ ವೃತ್ತ ತಲುಪಿತು. ಬಳಿಕ ರಸ್ತೆತಡೆ ನಡೆಸಿದರು.
'ಅಂಬಾನಿ, ಅದಾನಿಗೆ ಕೊಡುತ್ತಿಲ್ಲ..': ಸಚಿವ ಕೆ. ವೆಂಕಟೇಶ್ ಮಾತನಾಡಿ, ಎಫ್ಸಿಐನಿಂದ ರಾಜ್ಯಕ್ಕೆ ಅಕ್ಕಿ ಕೊಡಲು ಮೊದಲು ಒಪ್ಪಿಗೆ ಕೊಟ್ಟಿದ್ದರು. ಬಳಿಕ ಇದ್ದಕ್ಕಿದ್ದಂತೆ ನಿರಾಕರಿಸಿದರು. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು. ನಾವೇನು ಅಕ್ಕಿಯನ್ನು ಉಚಿತವಾಗಿ ಕೇಳಿಲ್ಲ, ಹಣ ಕೊಡುತ್ತೇವೆ ಕೊಡಿ ಎಂದರೂ ಅಕ್ಕಿ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂಬ ದುರುದ್ದೇಶದಿಂದ ಕೇಂದ್ರ ಸರ್ಕಾರ ನಿರಾಕರಿಸಿದೆ. ನಾವು ಅಕ್ಕಿಯನ್ನು ಅಂಬಾನಿ, ಅದಾನಿಗೆ ಕೊಡುತ್ತಿಲ್ಲ. ಬಡವರಿಗೆ ಕೊಡುತ್ತಿದ್ದೇವೆ, ಬಡವರ ವಿರುದ್ಧ ಇರುವ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಡೆಗೆ ನಮ್ಮ ಧಿಕ್ಕಾರ ಎಂದು ಘೋಷಣೆ ಕೂಗಿದರು
ಬಿಜೆಪಿಯವರು ಅಕ್ಕಿ ಕೊಡದಿದ್ದರೂ ನಾವು ಕಾರ್ಯಕ್ರಮವನ್ನು ಜಾರಿ ಮಾಡುತ್ತೇವೆ. ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ. ಶಕ್ತಿ ಯೋಜನೆಯನ್ನು ಜನರು ಬಳಸಿಕೊಳ್ಳುತ್ತಿರುವುದನ್ನು ಕಂಡು ಬಿಜೆಪಿಯವರು ಸಹಿಸುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲಾಡಳಿತ ಭವನದವರೆಗೂ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸರಕು ತುಂಬಿದ ಲಾರಿಗಳಿಗೆ ತೊಂದೆಯಾಯಿತು.
ಸತೀಶ್ ಜಾರಕಿಹೊಳಿ ಗರಂ: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಯೋಜನೆ ಮಾಡಿದ್ದೇವೆ. ಆದರೆ, ನಮ್ಮ ಮಷಿನ್ ಹ್ಯಾಕ್ ಮಾಡಿ ಕೇಂದ್ರದವರು ಬಂದ್ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಸರ್ವರ್ ಡೌನ್ ಆಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದರು.
ಅಕ್ಕಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ವಿರುದ್ಧ ನಡೆದ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ಲ್ಯಾನ್ ಮಾಡದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಗರಂ ಆದರು. ಇವಿಎಂ ರೀತಿಯಲ್ಲಿ ಸರ್ವರ್ ಹ್ಯಾಕ್ ಮಾಡಲಾಗಿದೆ. ಹೆಬ್ಬಾಳ್ಕರ್ ಮೇಡಂ ಅವರ ಇಲಾಖೆಯನ್ನೂ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹಾಗಾಗಿ ಕಾರ್ಯಗಳು ತಡವಾಗುತ್ತಿವೆ. ನಮ್ಮ ಸಿಸ್ಟಮ್ ಅನ್ನೇ ಕೇಂದ್ರ ಸರ್ಕಾರವು ಹ್ಯಾಕ್ ಮಾಡಿದೆ. ಅದನ್ನು ಸರಿಪಡಿಸಲು ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರದವರು ಎಷ್ಟೇ ಹ್ಯಾಕ್ ಮಾಡಿದ್ರೂ ಕೂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಗೆ ತರುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: Annabhagya: ಅನ್ನಭಾಗ್ಯ ಯೋಜನೆಗೆ ಅಕ್ಕಿಗಾಗಿ ಕೇಂದ್ರದ ವಿರುದ್ಧ ಬೆಳಗಾವಿ ಕಾಂಗ್ರೆಸ್ ಪ್ರತಿಭಟನೆ