ಚಾಮರಾಜನಗರ : ಕೆರೆ ಏರಿ ಒಡೆದು ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ನಡೆದಿದೆ. ಬೇಗೂರು ಹೋಬಳಿ ವ್ಯಾಪ್ತಿಗೆ ಸೇರಿದ ಈ ಬೆಳಚವಾಡಿ ಕೆರೆಯು 65 ಎಕರೆ ವಿಸ್ತೀರ್ಣ ಹೊಂದಿದ್ದು, ನೀರಿನ ಒತ್ತಡ ಹೆಚ್ಚಾಗಿ ಕೆರೆ ಏರಿ ಒಡೆದಿದೆ.
ಶನಿವಾರ ಮಧ್ಯಾಹ್ನ ಕೆರೆ ಏರಿ ಸೋರುತ್ತಿರುವ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಏರಿಯೇ ಮಧ್ಯಕ್ಕೆ ಇಬ್ಭಾಗವಾಗಿ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಪಂ ಸದಸ್ಯ ಮಹಾದೇವಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಕ್ರಮವಾಗಿ ರೈತನೋರ್ವ ಕೆರೆ ಮಧ್ಯೆ ಕಟ್ಟೆ ಕಟ್ಟಿದ್ದರಿಂದ ನೀರಿನ ಒತ್ತಡ ಹೆಚ್ಚಾಗಿ ಈ ಅವಘಡ ಸಂಭವಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕಳೆದ ಮೂರು ವರ್ಷಗಳಿಂದ ಗಾಂಧಿ ಗ್ರಾಮ ಯೋಜನೆಯ ಮೂಲಕ ಕೆರೆಗೆ ನೀರು ತುಂಬಿಸಲಾಗುತ್ತಿದೆ. ಈ ಕೆರೆ ತುಂಬಿದ ಬಳಿಕ ಕಮ್ಮರಹಳ್ಳಿ ಕೆರೆಗೆ ನೀರು ಹರಿಯುತ್ತಿತ್ತು. ಕೆರೆ ಏರಿ ಒಡೆದಿರುವುದರಿಂದ ಗ್ರಾಮಸ್ಥರು ಆತಂಕಕ್ಕೆಗೊಳಗಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ.
ಇದನ್ನೂ ಓದಿ : ಆಹಾರಕ್ಕಾಗಿ ಶ್ವಾನ ಮಾಡಿದ ಪ್ಲಾನ್ಗೆ ನೆಟ್ಟಿಗರು ಫುಲ್ ಫಿದಾ..!