ಚಾಮರಾಜನಗರ: ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಡ್ಡರದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ನೀರೆಯರು ಖಾಲಿ ಬಿಂದಿಗೆ ಹಿಡಿದು ಆಕ್ರೋಶ ಹೊರಹಾಕಿದರು.
ಗ್ರಾ.ಪಂ ವ್ಯಾಪ್ತಿಯ ಆಲದಮರದ ದೊಡ್ಡಿ, ಮುಸಕನ್ನಿ ದೊಡ್ಡಿ, ಉಪದೇಶಿಯ ನಗರ, ಚಿನ್ನಂಜಿ ದೊಡ್ಡಿ ಗ್ರಾಮದ ವ್ಯಾಪ್ತಿಯಲ್ಲಿ 400 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಸುಮಾರು 2,000 ಜನಸಂಖ್ಯೆಯನ್ನು ಹೊಂದಿದೆ. ಕೇವಲ ಎರಡು ಬೋರ್ವೆಲ್ಗಳ ಮುಖಾಂತರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಒಂದು ಬೋರ್‌ವೆಲ್‌ನಲ್ಲಿ ಅಂತರ್ಜಲ ಪ್ರಮಾಣ ಕಡಿಮೆಯಾಗಿ ನೀರು ಬತ್ತಿ ಹೋಗಿದೆ.

ಇರುವ ಕೊಳವೆಬಾವಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ವಡ್ಡರದೊಡ್ಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಈ ಸಂಬಂಧ ಗ್ರಾಮ ಪಂಚಾಯಿತಿ ಜೆಇ ಮಹೇಶ್ ಅವರಿಗೆ ದೂರು ಸಲ್ಲಿಸಿದರೂ ಸಹ ಕ್ರಮಕೈಗೊಳ್ಳದೆ, ನಿರ್ಲಕ್ಷ್ಯ ವಹಿಸಿದ್ದಾರೆ. ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ. ತಾತ್ಕಾಲಿಕವಾಗಿ ಟ್ಯಾಂಕರ್ ಮುಖಾಂತರವಾದರೂ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.