ಚಾಮರಾಜನಗರ: ಕೊರೊನಾ ಜಾಗೃತಿಗಾಗಿ ಪೊಲೀಸರು ಒಂದಲ್ಲ ಒಂದು ರೀತಿ ವಿನೂತನವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈಗ ಗೋಡೆಬರಹದ ಮೂಲಕ ಕೊರೊನಾ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಸಮರ ಸಾರಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಗೋಡೆಗಳಲ್ಲಿ ಕೊರೊನಾ ಜಾಗೃತಿಯ ಭಿತ್ತಿ ಚಿತ್ರಗಳನ್ನು ಬಿಡಿಸಿ ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ ಎಂದು ಚಿತ್ರಬರಹ ಮೂಲಕ ಜಾಗೃತಿಗೆ ಮುಂದಾಗಿದ್ದಾರೆ. ಲಾಕ್ಡೌನ್ ಪರಿಣಾಮ ಅಪರಾಧ ಚಟುವಟಿಕೆಗಳು ಕಡಿಮೆಯಾಗಿದ್ದು, ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಆದರೂ, ವಿನಾಕಾರಣ ರಸ್ತೆಗಿಳಿಯುತ್ತಿರುವವರು ಗೋಡೆ ಬರಹವನ್ನಾದರೂ ಓದಿ ಮನೆಯಲ್ಲೇ ಇರಲಿ ಎಂಬುದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರ ಆಶಯವಾಗಿದೆ.
ಇನ್ನು, ಜಿಲ್ಲೆಯ ಹಲವೆಡೆ ಚಿತ್ರಗೀತೆಗಳಿಗೆ, ಮಹದೇಶ್ವರನ ಭಕ್ತಿ ಗೀತೆಗಳಿಗೆ ಕೊರೊನಾ ಜಾಗೃತಿಯ ಹಾಡನ್ನ ಡಬ್ ಮಾಡಿ ಆಟೋಗಳಲ್ಲಿ ಟಾಂಟಾಂ ಮಾಡಿಸುತ್ತಿದ್ದಾರೆ. ಕೆಲವರಿಗೆ ಲಾಠಿ ರುಚಿಯನ್ನು ತೋರಿಸಿ ಬಿಸಿ ಮುಟ್ಟಿಸಿದ್ದಾರೆ.